ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಈ ಮೂಲಕ ಕೊರೊನಾದಿಂದ ಪಾರಾದ್ರೆ ಇತ್ತ ಬೆಂಗಳೂರಿನಲ್ಲಿ ಅವಘಡವೊಂದು ಸಂಭವಿಸಿದೆ.
ಹೌದು. ನೀರೆಂದು ಸ್ಯಾನಿಟೈಸರ್ ಕುಡಿದು 10 ವರ್ಷದ ಬಾಲಕಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ಸದ್ಯ ಬಾಲಕಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪೋಷಕರು ಬಿಸ್ಲೆರಿ ನೀರಿನ ಬಾಟಲಿನಲ್ಲಿ ಸ್ಯಾನಿಟೈಸರ್ ತುಂಬಿಸಿದ್ದರು. ಆದರೆ ಇದನ್ನು ಗಮನಿಸದ ಬಾಲಕಿ ನೀರೆಂದು ಸ್ಯಾನಿಟೈಸರನ್ನೇ ಕುಡಿದುಬಿಟ್ಟಿದ್ದಾಳೆ. ಕೂಡಲೇ ಈ ವಿಚಾರ ಪೋಷಕರ ಗಮನಕ್ಕೆ ಬಂದಿದ್ದು, ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೀಗಾಗಿ ಪೋಷಕರು ಸ್ಯಾನಿಟೈಸರ್ ಸೋಪ್ ವಾಟರ್ ಮಕ್ಕಳ ಕೈಗೆ ಸಿಗದಂತೆ ಜೋಪಾನವಾಗಿ ಇಡಿ. ಅಲ್ಲದೆ ವಾಟರ್ ಬಾಟಲ್ ನಲ್ಲಿ ಸ್ಯಾನಿಟೈಸರ್ ಸೋಪ್ ವಾಟರ್ ಹಾಕಿಡಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.