ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೆರೆ ನೀರಿನ ಸೆಳೆತದಲ್ಲಿ ಕೊಚ್ಚಿ ಹೋಗಿದ್ದ 8 ವರ್ಷದ ಬಾಲಕಿ ಶ್ರೀದೇವಿ ಹನುಮಂತಪ್ಪ ಗಾಣಿಗೇರ ದೇಹ ಇದೀಗ ತೇಲಿ ಹೋದ ಸ್ಥಳದ ಸುಮಾರು ಒಂದೂವರೆ ಕಿ.ಮೀ ಅಂತರದಲ್ಲಿ ಪತ್ತೆಯಾಗಿದೆ.
ಆಗಸ್ಟ್ 6 ರಂದು ಈ ಬಾಲಕಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಳು. ಅಂದಿನಿಂದ ನಿರಂತರವಾಗಿ ಎನ್‍ಡಿಆರ್‍ಎಫ್ ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ್ದರು. ಇದೀಗ ಬಾಲಕಿಯ ದೇಹ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಬಾಲಕಿಯ ಕುಟುಂಬಕ್ಕೆ ಶೀಘ್ರವೇ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಆತುರದ ನಿರ್ಧಾರ ಬೇಡ:
ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು, ಗ್ರಾಮೀಣ ಭಾಗದ ನಿವಾಸಿಗಳು ತುಂಬಿ ಹರಿಯುವ ಹಳ್ಳ, ಕೊಳ್ಳಗಳನ್ನು ರಭಸದ ಸಂದರ್ಭದಲ್ಲಿ ದಾಟಲು ಆತುರ ಪಡಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ನೀರು ಇಳಿಮುಖವಾಗುವವರೆಗೂ ತಾಳ್ಮೆಯಿಂದ ಇರಬೇಕು. ಸ್ಥಳೀಯ ಸ್ವಯಂ ಸೇವಕರು, ಅತಿವೃಷ್ಟಿ ನಿರ್ವಹಣಾ ಸಿಬ್ಬಂದಿಯ ನೆರವು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.