ಕಲಬುರಗಿ: ಪ್ರವಾಹದ ನೀರಿನಲ್ಲಿ ತಹಶೀಲ್ದಾರ್ ಅವರ ಕಾರು ಕೊಚ್ಚಿ ಹೋಗಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಣಾಪೂರ ಗ್ರಾಮದ ಬಳಿ ನಡೆದಿದೆ.
ತಹಶೀಲ್ದಾರ್ ಪಂಡಿತ ಬಿರಾದಾರ್ ಅವರ ಕಾರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ. ಈ ಹಿಂದೆ ಚಿಂಚೋಳಿಯಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಅವರು ಸದ್ಯ ಯಾದಗಿರಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಂಜೆ ವೇಳೆಗೆ ಕೆಲಸ ಮುಗಿಸಿ ಬೀದರ್ ನಗರದ ಮನೆಗೆ ಹಿಂದಿರುಗುವಾಗ ಚಿಂಚೋಳಿ ತಾಲೂಕಿನ ಗಣಾಪೂರ ಗ್ರಾಮದ ಹತ್ತಿರದ ಹಳ್ಳ ದಾಟುವಾಗ ಪ್ರವಾಹಕ್ಕೆ ಸಿಲುಕಿದ್ದರು.
ಕಾರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಜೀವ ರಕ್ಷಣೆಗಾಗಿ ತಹಶೀಲ್ದಾರ್ ಅವರು ಮರವೇರಿ ಕುಳಿತ್ತಿದ್ದರು. ಬಳಿಕ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿ ರಕ್ಷಣೆಗೆ ಸಹಾಯ ಕೋರಿದ್ದರು. ಕೂಡಲೇ ಕಾರ್ಯಪ್ರವೃತರಾದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸತತ 3 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ತಹಶೀಲ್ದಾರ್ ಅವರನ್ನು ರಕ್ಷಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಇಂದು ಸಾಯಂಕಾಲ ಸುರಿದ ಧಾರಕಾರ ಮಳೆಗೆ ಚಿಂಚೋಳಿ ತಾಲೂಕಿನ ಜನ ಅಕ್ಷರಶಃ ನಲುಗಿ ಹೋಗಿದೆ. ಕೇವಲ 3 ಗಂಟೆ ಸುರಿದ ಮಳೆಗೆ ತಾಲೂಕಿನ ಐದಕ್ಕು ಹೆಚ್ಚು ಗ್ರಾಮಗಳು ಜಲದಿಗ್ಬಂಧನ ಎದುರಾಗಿದೆ. ಹೀಗಾಗಿ ಗ್ರಾಮದ ಜನ ಜಾನುವಾರುಗಳು ಜೀವ ಕೈಯಲ್ಲಿ ಹಿಡಿದು ಬದುಕಬೇಕಾಗಿತ್ತು.
ಪ್ರತಿ ವರ್ಷ ಬರದಿಂದ ರಾಜ್ಯದಲ್ಲಿ ಸುದ್ದಿಯಾಗುತ್ತಿದ್ದ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾದರೆ, ಕೆಲ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆವರೆಗೆ ಕಲಬುರಗಿ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಕಾರ ಮಳೆಯಾಗಿದೆ. ಪರಿಣಾಮ ಚಿಂಚೋಳಿ ತಾಲೂಕಿನ ಕೊಳ್ಳುರ, ಚಂದ್ರಪಳ್ಳಿ, ಐನೋಳಿ, ಫತ್ತೆಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯ ನೀರು ಗ್ರಾಮಗಳಿಗೆ ನುಗ್ಗಿ ಅಪಾರ ಪ್ರಮಾಣದ ನಷ್ಟವುಂಟು ಮಾಡಿದೆ.
ಗ್ರಾಮಗಳಿಗೆ ನೀರು ನುಗ್ಗಿದ ಪರಿಣಾಮ ಬಹುತೇಕ ಮನೆಗಳು ಸಹ ಜಲಾವೃತವಾಗಿವೆ. ಈ ನಡುವೆ ಮಿನಿ ಮಲೆನಾಡು ಖ್ಯಾತಿಯ ಚಿಂಚೋಳಿ ಗುಡ್ಡಗಳಲ್ಲಿ ಫಾಲ್ಸ್ ನಂತೆ ನೀರು ಹರಿಯುವ ದೃಶ್ಯಗಳು ಕಂಡು ಬಂದಿತ್ತು. ಮುಂಗಾರು ಆರಂಭದ ಬಳಿಕ ಕಲಬುರಗಿಯಲ್ಲಿ ಧಾರಕಾರವಾಗಿ ಸುರಿದ ಒಂದೆ ಮಳೆಗೆ ಜನ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕ್ಕಿದ್ದು, ಜಿಲ್ಲಾಡಳಿತ ಮತ್ತು ಸರ್ಕಾರ ಜಲಾವೃತಗೊಂಡ ಗ್ರಾಮದ ಜನರ ನೇರವಿಗೆ ಧಾವಿಸಬೇಕಿದೆ.