ಕೋಲಾರ: ಕೊರೊನಾ ಹಾಗೂ ಸರ್ಕಾರದ ನಿಷೇಧಾಜ್ಞೆಯಿಂದ ಅಬಕಾರಿ ಇಲಾಖೆಗೆ ಹೊಸ ವರ್ಷದಂದು ಸುಮಾರು 40 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ತಿಳಿಸಿದರು.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಷೇಧಾಜ್ಞೆಯಿಂದಾಗಿ ಹೊಸ ವರ್ಷದಂದು ಅಬಕಾರಿ ಇಲಾಖೆಗೆ ಕೇವಲ 161 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ಬಾರಿ ಹೊಸ ವರ್ಷಕ್ಕೆ 200 ಕೋಟಿ ರೂಪಾಯಿ ಆದಾಯ ಬಂದಿತ್ತು. ಆದರೆ ಈ ಬಾರಿ ಹಲವು ಗೊಂದಲಗಳಿಂದ ಸುಮಾರು 40 ಕೋಟಿ ರೂಪಾಯಿಯಷ್ಟು ನಷ್ಟ ಆಗಿದೆ ಎಂದು ಅವರು ಹೇಳಿದರು.
ಈ ನಷ್ಟಕ್ಕೆ ಸರ್ಕಾರದ ನಿಷೇಧಾಜ್ಞೆ ಜಾರಿ ಮಾಡದ್ದೇ ಕಾರಣ. ಜಿಲ್ಲೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದಾರೆ, ಹಾಗಾಗಿ ಜಿಲ್ಲೆಯ ಹಲವು ವಿಚಾರಗಳನ್ನ ಚರ್ಚೆ ಮಾಡುವ ನಿಟ್ಟಿನಲ್ಲಿ ಎಲ್ಲ ಶಾಸಕರನ್ನು ಕರೆದು ವಿಚಾರ ಮಾಡುವೆ. ಅಲ್ಲದೆ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡುವುದು ಹಾಗೂ ರಿಂಗ್ ರಸ್ತೆ ಮಾಡುವಂತೆ ಮನವಿ ಮಾಡುವುದಾಗಿ ಅವರು ಹೇಳಿದರು.