ಬೆಂಗಳೂರು: ಅವನು ಮತ್ತೆ ಶ್ರಾವಣಿ ಧಾರಾವಾಹಿ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಕಿರುತೆರೆಯ ನಟಿ ಚೈತ್ರಾ ರೆಡ್ಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ತಮ್ಮ ಬಹುಕಾಲದ ಗೆಳೆಯ ಹಾಗೂ ಛಾಯಾಗ್ರಾಹಕ ರಾಕೇಶ್ ಸುಮಲ ಅವರ ಜೊತೆ ಚೈತ್ರಾ ವಿವಾಹವಾಗುತ್ತಿದ್ದು ಸದ್ಯ ಸರಳವಾಗಿ ಮನೆಯವರು ಹಾಗೂ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕೆಲ ಕಿರುತೆರೆಯ ನಟರು ಸಹ ಭಾಗಿಯಾಗಿದ್ದು, ಈ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.
ಬೆಂಗಳೂರಿನ ಹುಡುಗಿಯಾಗಿರುವ ಚೈತ್ರಾ ರೆಡ್ಡಿ, ಕನ್ನಡದ ಅವನು ಮತ್ತೆ ಶ್ರಾವಣಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, ವಿವಿಧ ಭಾಷೆಗಳ ಧಾರಾವಾಹಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮಿಳಿನ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಇನ್ನೂ ಹಲವು ಭಾಷೆಗಳಲ್ಲಿ ಚೈತ್ರಾ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ. ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದು, ತಮಿಳಿನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.
ಕನ್ನಡದಲ್ಲಿ ಸಹ ಅವನು ಮತ್ತೆ ಶ್ರಾವಣಿ ಧಾರಾವಾಹಿ ಮಾತ್ರವಲ್ಲದೆ ನಟ ವಿನೋದ್ ಪ್ರಭಾಕರ್ ಅಭಿನಯದ ರಗಡ್ ಸಿನಿಮಾದಲ್ಲಿ ಸಹ ಚೈತ್ರಾ ಮಿಂಚಿದ್ದಾರೆ. ರಾಕೇಶ್ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದು, ಜಾಹೀರಾತುಗಳನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಬಹುಕಾಲದಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ವಿವಾಹವಾಗುವ ಮುನ್ಸೂಚನೆಯನ್ನು ನೀಡಿದ್ದಾರೆ.
ಚೈತ್ರ ಹಾಗೂ ರಾಕೇಶ್ ಪ್ರೀತಿಸುತ್ತಿರುವ ವಿಚಾರವನ್ನು ಈ ಹಿಂದೆಯೇ ಬಹಿರಂಗಪಡಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್ ಮಾಡುತ್ತಿದ್ದರು. ರಾಕೇಶ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಸಾಲುಗಳನ್ನು ಬರೆಯುತ್ತಿದ್ದರು. ಈ ಮೂಲಕ ಪ್ರೀತಿಯ ಸುಳಿವು ನೀಡಿದ್ದರು. ಲಾಕ್ ಡೌನ್ ವೇಳೆ ಸಹ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಚೈತ್ರಾ, ರಾಕೇಶ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು.