– ಬೈಕಿನಲ್ಲಿ ಬರ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ರು
ಜೈಪುರ: ನಿಶ್ಚಿತಾರ್ಥ ಆಗಿದ್ದರೂ ಬೇರೆ ಹುಡುಗಿಯ ಜೊತೆ ಸುತ್ತಾಡುತ್ತಿದ್ದ ಭಾವಿ ಪತಿಗೆ ಯುವತಿ ನಡುರಸ್ತೆಯಲ್ಲೇ ಥಳಿಸಿರುವ ಘಟನೆ ರಾಜಸ್ಥಾನದ ಉದಯಪುರ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ರಿಷಭ್‍ದೇವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಭಾವಿ ಪತಿಗೆ ರಸ್ತೆಯಲ್ಲಿ ಹೊಡೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಉದಯಪುರ್ ಜಿಲ್ಲೆಯ ಯುವತಿಗೆ ಯುವಕನೊಬ್ಬನ ಜೊತೆ ನಿಶ್ಚಿತಾರ್ಥವಾಗಿತ್ತು. ಆದರೆ ಎಂಗೇಜ್‍ಮೆಂಟ್ ಆಗಿದ್ದರೂ ಯುವಕ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದನು.
ಅಲ್ಲದೇ ಪ್ರತಿದಿನ ಆಕೆಯನ್ನು ಬೈಕಿನಲ್ಲಿ ಕೂರಿಸಿಕೊಂಡು ಸುತ್ತಾಡುತ್ತಿದ್ದಾನೆ ಎಂದು ನಿಶ್ಚಿತಾರ್ಥವಾಗಿದ್ದ ಯುವತಿಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡ ಯುವತಿ ಅವರಿಬ್ಬರು ಓಡಾಡುತ್ತಿದ್ದ ರಸ್ತೆಯಲ್ಲಿ ಅವರು ಬರುವ ಮೊದಲೆ ಕಾದು ಕುಳಿತಿದ್ದಳು. ಅದೇ ಮಾರ್ಗವಾಗಿ ಯುವತಿಯ ಭಾವಿ ಪತಿ ಹುಡುಗಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಬಂದಿದ್ದಾನೆ. ಅಲ್ಲೇ ಕಾದು ಕುಳಿತಿದ್ದ ಯುವತಿ ಇಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ.
ಭಾವಿ ಪತಿ ಹುಡುಗಿಯ ಜೊತೆ ಬೈಕಿನಲ್ಲಿ ಕುಳಿತಿರುವಾಗಲೇ ಆತನಿಗೆ ಯುವತಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ತಕ್ಷಣ ಸ್ಥಳದಲ್ಲಿದ್ದವರು ಸ್ಥಳಕ್ಕೆ ಬಂದು ಏನಾಯಿತು ಎಂದು ವಿಚಾರಿಸಿದ್ದಾರೆ. ಆಗ ಯುವತಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೊನೆಗೆ ಸ್ಥಳದಲ್ಲಿದ್ದವರು ಯುವತಿಗೆ ಸಮಾಧಾನ ಮಾಡಿ ಭಾವಿ ಪತಿಯ ಬೈಕ್‍ನಲ್ಲಿ ಮನೆಗೆ ಕಳುಹಿಸಿದ್ದಾರೆ.
ಸ್ಥಳದಲ್ಲಿದ್ದವರು ಇದನ್ನು ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ ಇದುವರೆಗೂ ಈ ಕುರಿತು ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.