– ಮುಂದಿನ ಮೂರು ದಿನ ಮಳೆ ಸಂಭವ
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ನಿವಾರ್ ಸೈಕ್ಲೋನ್ ಇನ್ನೆರಡು ದಿನಗಳಲ್ಲಿಯೇ ಅಪ್ಪಳಿಸಲಿದ್ದು, ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಸೈಕ್ಲೋನ್ ಪರಿಣಾಮ ನವೆಂಬರ್ 25 ರಿಂದ 27ರವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದೆ.
ಬಂಗಾಲ ಉಪಸಾಗರ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನ.25 ರಂದು ತಮಿಳುನಾಡು ಹಾಗೂ ಪಾಂಡಿಚೇರಿ ಕರಾವಳಿಯಲ್ಲಿ ದಾಟಿ ಕಾರೈಕಲ್, ಮಾಮಲಪುರಂ ಹತ್ತಿರ ಸೈಕ್ಲೋನ್ ಕ್ರಾಸ್ ಆಗುತ್ತೆ. ಇದರ ಪ್ರಭಾವದಿಂದಾಗಿ ಕರಾವಳಿಯ ಕೆಲ ಭಾಗದಲ್ಲಿ ನ.25, 26, 27 ರಂದು ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ನ. 23ರಂದು ಒಣ ಹವೆ ಇರಲಿದ್ದು, ನ. 24 ರಿಂದ 27 ರವರೆಗೆ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನಲ್ಲಿ ನ.24 ರಂದು ಕೆಲವು ಕಡೆ ಮಳೆಯಾಗುವ ಸಾಧ್ಯತೆಗಳಿದ್ದು, ನ.25 ರಿಂದ 27 ರವರೆಗೆ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಲಿದೆ. ಕೋಲಾರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಮಾನ ಇಲಾಖೆ ತಜ್ಞ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.