– ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇ ತಾವೂ ಸೋಂಕಿಗೆ ಒಳಗಾದ್ರು
ಭೋಪಾಲ್: ಕೊರೊನಾ ವೈರಸ್ ಗೆ ತುತ್ತಾಗಿದ್ದ 26 ವರ್ಷದ ವೈದ್ಯರೊಬ್ಬರು ನಿಧನರಾಗಿದ್ದಾರೆ.
ಮೃತ ದುರ್ದೈವಿ ವೈದ್ಯರನ್ನು ಡಾ. ಶುಭಂ ಉಪಾಧ್ಯಾಯ(26) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಮಧ್ಯಪ್ರದೇಶ ನಿವಾಸಿ. ಕೊರೊನಾ ವೈರಸ್ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಶುಭಂ ಅವರು ಕಳೆದ 1 ತಿಂಗಳಿನಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬುಧವಾರ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ವೈದ್ಯರ ಶ್ವಾಸಕೋಶದ ಮೇಲೆ ಕೊರೊನಾ ವೈರಸ್ ಭಾರೀ ಪರಿಣಾಮ ಬೀರಿದೆ. ಹೀಗಾಗಿ ಅವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದ್ದು, ಚೆನ್ನೈ ಆಸ್ಪತ್ರೆಗೆ ಕರೆತರಬೇಕಾಗಿತ್ತು. ಆದರೆ ನಿವಾರ್ ಚಂಡಮಾರುತದಿಂದಾಗಿ ವಿಮಾನಯಾನ ಅಸಾಧ್ಯವಾಗಿತ್ತು. ಪರಿಣಾಮ ಅವರು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.
Advertisement
ಈ ಸಂಬಂಧ ವೈದ್ಯ ಡಾ. ಅಜಯ್ ಗೋಯೆಂಕ ಮಾತನಾಡಿ, ಶುಭಂ ಅವರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಶೇ.100 ರಷ್ಟು ಅವರ ಶ್ವಾಸಕೋಶ ಹಾನಿಗೊಳಗಾಗಿತ್ತು. ಅವರಿಗೆ ಕಳೆದ ನವೆಂಬರ್ 10 ರಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
Advertisement
ಶುಭಂ ಅವರು ಮಧ್ಯಪ್ರದೇಶದ ಸಾಗರ್ ನ ಸರ್ಕಾರಿ ಬುಂದೇಲ್ ಖಂಡ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಇದೀಗ ಅವರೇ ಕೋವಿಡ್ 19ಗೆ ಬಲಿಯಾಗಿರುವುದು ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ.
ಶುಭಂ ನಿಧನಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹ್ಹಾಣ್ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಡಾ. ಶುಭಂ ಅವರು ದೇಶದ ನಿಜವಾದ ಪ್ರಜೆ ಎಂದು ಬಣ್ಣಿಸಿದರು. ಅವರು ಕೋವಿಡ್ 19 ರೋಗಿಗಳಿಗಾಗಿ ಸಮರ್ಪಕ ಸೇವೆ ಸಲ್ಲಿಸಿದ್ದಾರೆ. ಆದರೆ ಈ ಮಧ್ಯೆ ತಾವೇ ಸೋಂಕಿಗೆ ಒಳಗಾದರು. ಅವರ ಕಾರ್ಯದ ಬಗ್ಗೆ ಹೆಮ್ಮೆಯಾಗುತ್ತಿದ್ದು, ಕುಟುಂಬದ ಸದಸ್ಯರೊಂದಿಗೆ ಸರ್ಕಾರ ಸದಾ ಇರುತ್ತೆ ಎಂದು ಭರವಸೆ ನೀಡಿದರು.