ಚಿಕ್ಕಮಗಳೂರು: 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಗೆ ಕೊಚ್ಚಿ ಹೋದ ಸೇತುವೆ ಇನ್ನೂ ನಿರ್ಮಾಣವಾಗದ ಹಿನ್ನೆಲೆ ಮತ್ತೆ ಮಳೆಗಾಲ ಬಂತೆಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಜನ ಆತಂಕಕ್ಕೀಡಾಗಿದ್ದಾರೆ. ಸರ್ಕಾರ ತಾತ್ಕಾಲಿಕವಾಗಿ ಕಬ್ಬಣದ ಕಾಲುಸಂಕವನ್ನ ನಿರ್ಮಾಣ ಮಾಡಿತ್ತು. ಆದರೆ ಈ ವರ್ಷ ಸುರಿದ ಅಕಾಲಿಕ ಮಳೆಯಿಂದ ಆ ಸೇತುವೆಯೂ ಇಂದೋ-ನಾಳೆಯೋ ಎಂದು ದಿನ ಎಣಿಸುತ್ತಿರೋದ್ರಿಂದ ಬಂಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಏಳೆಂಟು ಹಳ್ಳಿಯ ಜನ ಕಂಗಾಲಾಗಿದ್ದಾರೆ. ತಾತ್ಕಾಲಿಕವಾಗಿ ಕಬ್ಬಿಣದ ಕಾಲುಸಂಕ ನಿರ್ಮಿಸಿದ್ದ ಶಾಸಕರು ಹಾಗೂ ಅಧಿಕಾರಿಗಳು ಇಂದಿಗೂ ಇತ್ತ ತಲೆ ಹಾಕಿ ಹಾಕಿಲ್ಲ. ಆ ಕಾಲು ಸಂಕ ಕೂಡ ಹೇಮಾವತಿ ನೀರಿನ ರಭಸಕ್ಕೆ ಕಾಲುಸಂಕ ನಿಂತಿರೋ ಹಿಂದೆ-ಮುಂದಿನ ಮಣ್ಣು ಕುಸಿಯುತ್ತಿರುವುದರಿಂದ ಈ ಸಂಕವೂ ಶೀಘ್ರದಲ್ಲೇ ಹೇಮಾವತಿಗೆ ಬಲಿಯಾಗುವ ಆತಂಕ ಸ್ಥಳೀಯರಲ್ಲಿ ಮೂಡಿದೆ.
Advertisement
ಸಂಕ ನಿರ್ಮಿಸಿದ ಅಧಿಕಾರಿಗಳು ಅದಕ್ಕೆ ಬೇಕಾದ ಸೂಕ್ತ ಭದ್ರತೆ ಕಲ್ಪಿಸಿಲ್ಲ ಅನ್ನೋದು ಸ್ಥಳೀಯರ ಮಾತು. ಕಬ್ಬಣದ ಕಾಲುಸೇತುವೆ ತಂದರು. ಈ ತುದಿಯಿಂದ ಆ ತುದಿಗೆ ಇಟ್ಟು ಹೋದರು. ಅದರ ಪರಿಣಾಮವೇ ಸೇತುವೆ ಈ ಸ್ಥಿತಿ ತಲುಪಿದ ಅಂತಾರೆ ಸ್ಥಳೀಯರು. ಅಷ್ಟೆ ಅಲ್ಲದೆ, ಸೇತುವೆ ಮಧ್ಯ ಹಾಗೂ ನೀರು ಹರಿಯುವ ಜಾಗದಲ್ಲಿ ಸಂಕಕ್ಕೆ ಸಪೋರ್ಟಿಂಗ್ ಪಿಲ್ಲರ್ ಇಟ್ಟಿರೋ ಅಧಿಕಾರಿಗಳು ಸಿಮೆಂಟ್ ಪೈಪಿನ ಮೇಲೆ ಸೇತುವೆಯನ್ನ ನಿಲ್ಲಿಸಿದ್ದಾರೆ. ಇದು ತಡೆಯುತ್ತಾ, ಮಳೆ ಬಂದರೆ ಕೊಚ್ಚಿ ಹೋಗುತ್ತೆ, ಸೇತುವೆಯ ಎರಡೂ ಬದಿ ಹಾಗೂ ಮಧ್ಯದಲ್ಲಿ ಗಟ್ಟಿಯಾದ ಗ್ರಿಪ್ ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈಗ ಮತ್ತೆ ನಾಳೆ-ನಾಡಿದ್ದು ಎನ್ನುವಷ್ಟರಲ್ಲಿ ಮಳೆಗಾಲ ಆರಂಭವಾಗುತ್ತೆ. ಒಂದು ವೇಳೆ ಈ ಸೇತುವೆಯೂ ಕೊಚ್ಚಿ ಹೋದರೆ ನಮ್ಮ ಬದುಕು ಹೇಗೆಂದು ಸ್ಥಳೀಯರು ಚಿಂತಾಕ್ರಾಂತರಾಗಿದ್ದಾರೆ.
Advertisement
Advertisement
ಸ್ಥಳೀಯರೇ ನಿರ್ಮಿಸಿಕೊಂಡಿದ್ದ ಸೇತುವೆ ಕೊಚ್ಚಿ ಹೋಗಿತ್ತು: 2019ರಲ್ಲಿ ಕೊಚ್ಚಿ ಹೋಗಿದ್ದ ಸೇತುವೆಯಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದ ಜನ ನಗರ ಪ್ರದೇಶಕ್ಕೆ ಬರಬೇಕೆಂದರೆ ಸುಮಾರು ಏಳೆಂಟು ಕಿ.ಮೀ. ಸುತ್ತಿಕೊಂಡು ಬರಬೇಕಿತ್ತು. ಅದಕ್ಕಾಗಿ 2019ರ ಮಳೆಗಾಲ ಮುಗಿಯುತ್ತಿದ್ದಂತೆ ಸ್ಥಳೀಓಯರೇ ಸೇತುವೆ ನಿರ್ಮಿಸಿಕೊಂಡಿದ್ದರು. 2020ರ ಮಳೆಗೆ ಅದೂ ಕೂಡ ಕೊಚ್ಚಿ ಹೋಗಿತ್ತು. ಆಗ ಸ್ಥಳಕ್ಕೆ ಬಂದಿದ್ದ ಶಾಸಕ ಕುಮಾರಸ್ವಾಮಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆಗೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡಿದ್ದರು. ಆಗ ತಾತ್ಕಾಲಿಕವಾಗಿ ಕಬ್ಬಿಣದ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಅತ್ತು ಕರೆದು ಔತಣ ಮಾಡಿಸಿಕೊಂಡರೆಂಬಂತೆ ಘೇರಾವ್ ಹಾಕಿ ಮಾಡಿಸಿಕೊಂಡ ಸೇತುವೆಯೂ ಈಗ ಅವನತಿಯ ಅಂಚಿನಲ್ಲಿದೆ.
Advertisement
ಜನನಾಯಕರ ಭೇಟಿ: 2019ರಲ್ಲಿ ಕಾಫಿನಾಡು ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ ಕಂಡಿತ್ತು. ಸ್ಥಳೀಯರ ಪ್ರಕಾರ 45 ವರ್ಷಗಳ ಹಿಂದಿನ ಮಳೆ ಸುರಿದಿತ್ತು. ಆಗ ಆದ ಅನಾಹುತಗಳು ಇಂದಿಗೂ ಸರಿಯಾಗಿಲ್ಲ. ಆಗ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್, ಅಂದಿನ ಮಂತ್ರಿ ಸಿ.ಟಿ.ರವಿ, ಮಾಧುಸ್ವಾಮಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕುಮಾರಸ್ವಾಮಿ ಭೇಟಿ ನೀಡಿ ಸ್ಥಳಿಯರಿಗೆ ಶೀಘ್ರವೇ ಸೇತುವೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಿಕೊಡುವಂತೆ ಭರವಸೆ ನೀಡಿದ್ದರು.
3 ಕೋಟಿ ಅನುದಾನ, ಕಮಿಷನ್ ಕ್ಯಾತೆ : ಸೇತುವೆ ನಿರ್ಮಾಣಕ್ಕೆ 3 ಕೋಟಿ ಅನುದಾನ ಬಂದಿದೆ ಅಂತ ಹೇಳಿಯೇ ಒಂದು ವರ್ಷ ಕಳೆದಿದೆ. ಆದರೆ ಕೆಲಸ ಮಾತ್ರ ಇನ್ನೂ ಆರಂಭವಾಗಿಲ್ಲ. ಸೇತುವೆ ನಿರ್ಮಾಣಕ್ಕೆ ಗುತ್ತಿಗೆ ಪಡೆದರೆ ಇಂಜಿನಿಯರ್ ಹಾಗೂ ಕಂಟ್ರಾಕ್ಟ್‍ದಾರರು ಸಿಕ್ಕಪಟ್ಟೆ ಕಮಿಷನ್ ನೀಡಬೇಕಂತೆ. ಅದಕ್ಕೆ ಅಧಿಕಾರಿ ಹಾಗೂ ರಾಜಕಾರಣಿಗಳಿಗೆ ಕಮಿಷನ್ ಕೊಡಲಾಗದೆ ಯಾರೂ ಸೇತುವೆ ನಿರ್ಮಾಣಕ್ಕೆ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಮೋದಿ ಗುಡ್, ಉಳಿದವರು ಬ್ಯಾಡ್ : ನರೇಂದ್ರ ಮೋದಿಗೆ ಒಳ್ಳೆ ಉದ್ದೇಶವಿದೆ. ಇಲ್ಲ ಎಂದು ಹೇಳಲ್ಲ. ಉಳಿದ ಪುಡಾರಿಗಳು ಅವರ ಆಸೆ ನೆರವೇರಿಸಲು ಬಿಡಲ್ಲ ಎಂದು ರಾಜ್ಯ ನಾಯಕರ ಬಗ್ಗೆ ಹಳ್ಳಿಗರು ಕಿಡಿಕಾರಿದ್ದಾರೆ. ನಾವು ಬಿಜೆಪಿಯವರೆ. ಇವತ್ತು ಯಾಕಾದ್ರು ಬಿಜೆಪಿಗೆ ವೋಟು ಹಾಕಿದ್ವೋ ಎಂದು ನಮಗೆ ಬೇಜಾರಾಗಿ ಪಶ್ಚಾತ್ತಾಪ ಪಡುವಂತಾಗಿದೆ ಎಂದು ತಮ್ಮ ಮೇಲೆ ತಾವೇ ಅಸಮಾಧಾನ ಹೊರಹಾಕಿಕೊಂಡಿದ್ದಾರೆ. ಸರ್ಕಾರ, ಶಾಸಕರು, ಸಂಸದರು, ಅಧಿಕಾರಿಗಳಿಗೆ ಬೇಡಿ ಬೇಜಾರಾಗಿ ಈಗ ಪ್ರಧಾನಿ ಮೋದಿಗೆ ಪತ್ರ ಬರೆದು ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.