ನಟ ವಿಜಯ ರಾಘವೇಂದ್ರ ಶಶಿಕಾಂತ್ ಗಟ್ಟಿ ನಿರ್ದೇಶನದ ನೂತನ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ‘ರಿಂಗ ರಿಂಗ ರೋಸಸ್’ ಎಂದು ಟೈಟಲ್ ಫಿಕ್ಸ್ ಆಗಿದ್ದು, ಐಪಿಸಿ ಸೆಕ್ಷನ್ 300 ನಂತರ ಮತ್ತೊಮ್ಮೆ ಶಶಿಕಾಂತ್ ಗಟ್ಟಿ ಜೊತೆ ಕೆಲಸ ಮಾಡುತ್ತಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಚಿನ್ನಾರಿ ಮುತ್ತಾ.
Advertisement
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿರುವ ವಿಜಯ ರಾಘವೇಂದ್ರ ಸಿನಿಮಾ ನಿರ್ಮಾಣಕ್ಕೂ ಶಶಿಕಾಂತ್ ಗಟ್ಟಿ ಮುಂದಾಗಿರೋದಕ್ಕೆ ಶುಭ ಕೋರಿದ್ದಾರೆ. ರಾಂಚಿ, ಐಪಿಸಿ ಸೆಕ್ಷನ್ 300 ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಶಶಿಕಾಂತ್ ಗಟ್ಟಿ ಆರು ವರ್ಷ ಸಮಯ ತೆಗೆದುಕೊಂಡು ‘ರಿಂಗ ರಿಂಗ ರೋಸಸ್’ ಕಥೆ ಹೆಣೆದಿದ್ದಾರೆ. ಚಿತ್ರ ಗ್ಯಾಂಗ್ಸ್ಟರ್ ಕಥಾನಕ ಹೊಂದಿದ್ದು, ವಿಭಿನ್ನ ಹಾಗೂ ಹೊಸತನದಿಂದ ‘ರಿಂಗ ರಿಂಗ ರೋಸಸ್’ ಸಿನಿಮಾ ಕೂಡಿರಲಿದೆ ಎಂದು ನಿರ್ದೇಶಕ ಶಶಿಕಾಂತ್ ಗಟ್ಟಿ ತಿಳಿಸಿದ್ದಾರೆ.
Advertisement
Advertisement
ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜೊತೆ ಮೊದಲ ಬಾರಿ ತಮ್ಮದೇ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣವನ್ನು ಮಾಡುತ್ತಿದ್ದಾರೆ ಶಶಿಕಾಂತ್ ಗಟ್ಟಿ. ರೆಗ್ಯುಲರ್ ಸಿನಿಮಾಗಳ ಹೀರೋ ಹೀರೋಯಿನ್ ಕಾನ್ಸೆಪ್ಟ್ ಗಿಂತಲೂ ಭಿನ್ನವಾದ ಕಥಾನಕ ಹಾಗೂ ಚಿತ್ರಕಥೆ ಚಿತ್ರದಲ್ಲಿ ನೀಡಲು ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಒಬ್ಬ ಸಿನಿಮಾ ಹೀರೋಯಿನ್ ಜೀವನದಲ್ಲಾಗುವ ಘಟನೆಗಳ ಸುತ್ತ ‘ರಿಂಗ ರಿಂಗ ರೋಸಸ್’ ಸಿನಿಮಾ ಕಥೆ ಸುತ್ತಲಿದ್ದು, ಚಿತ್ರದಲ್ಲಿ ಐದು ಜನ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ವಿಜಯ್ ರಾಘವೇಂದ್ರ, ಸತ್ಯ, ರಘು ಭಟ್, ಕಾವ್ಯ ಗೌಡ, ತ್ರಿಪುರಾರಿ ಯಾದವ್, ವಿಶಾಲ್ ಹೆಗ್ಡೆ, ಸ್ನೇಕ್ ಅರುಣ್ ತಾರಾಬಳಗದಲ್ಲಿದ್ದು, ನಟ ವಿಜಯ ರಾಘವೇಂದ್ರ ಚಿತ್ರದಲ್ಲಿ ಹೊಸ ಅವತಾರದಲ್ಲಿ ತೆರೆ ಮೇಲೆ ಕಾಣಸಿಗಲಿದ್ದಾರೆ.
Advertisement
ಶಶಿಕಾಂತ್ ಮೋಷನ್ ಪಿಕ್ಚರ್ಸ್ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ಮೂಲಕ ‘ರಿಂಗ ರಿಂಗ ರೋಸಸ್’ ಸಿನಿಮಾ ನಿರ್ಮಾಣವಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಗೌತಮ್ ಶ್ರೀವತ್ಸ ಸಂಗೀತ, ವಿನೋದ್ ರಾಜ್ ಛಾಯಾಗ್ರಹಣ `ರಿಂಗ ರಿಂಗ ರೋಸಸ್’ ಚಿತ್ರಕ್ಕಿದೆ.