– ತಲೆಕೆಡಿಸಿಕೊಳ್ಳದ ರಾಯಚೂರು ನಗರಸಭೆ
– ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಿವಾಸಿಗಳು
ರಾಯಚೂರು: ನಗರದಲ್ಲಿ ನಿರಂತರವಾಗಿ ಸುರಿದ ಮಳೆ ಕೆಲವೆಡೆ ಭಾರೀ ಅವಾಂತರ ಸೃಷ್ಟಿಸಿದೆ. ಕೆಲ ಪ್ರದೇಶದ ಜನ ಮನೆಯಿಂದ ಹೊರಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರಿನಿಂದ ರಸ್ತೆಗಳೇ ಮಾಯವಾಗಿವೆ. ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಇಲ್ಲಿನ ಬೆಲ್ಲಂ ಕಾಲೋನಿಯಲ್ಲಿ ಸುಮಾರು ಐದು ಅಡಿಯಷ್ಟು ನೀರು ನಿಂತಿದೆ. ಇದರಿಂದ ಜನ ಹೊರಗಡೆ ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ಹರಿದು ಹೋಗದೆ ನಿಂತಲ್ಲೇ ನಿಂತಿದೆ. ರಸ್ತೆ, ಗಾರ್ಡನ್ ಜಾಗ, ಖಾಲಿ ಸೈಟ್ ಯಾವುದು ಎಲ್ಲಿದೆ ಅನ್ನೋದು ತಿಳಿಯದಷ್ಟು ಮಟ್ಟಿಗೆ ನೀರು ನಿಂತಿದೆ. ಐದು ಅಡಿಯಷ್ಟು ನೀರು ರಸ್ತೆಯಲ್ಲಿ ನಿಂತಿರುವುದರಿಂದ ಕಾರು, ಬೈಕ್ ಓಡಾಟಕ್ಕೆ ಅಡ್ಡಿಯಾಗಿದೆ.
ಚರಂಡಿ ವ್ಯವಸ್ಥೆ ಸರಿಪಡಿಸಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸಿದರೆ ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಯುತ್ತದೆ. ಆದ್ರೆ ಕಳೆದ ಐದು ವರ್ಷಗಳಿಂದ ಇಲ್ಲಿನ ನಿವಾಸಿಗಳು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಎಡಬಿಡದೆ ಎರಡು ದಿನ ಕಾಲ ಮಳೆ ಸುರಿದಿದ್ದರಿಂದ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಸ್ವಲ್ಪ ತಗ್ಗು ಪ್ರದೇಶದಲ್ಲಿ ಉದ್ಯಾನವನದ ಜಾಗ ಇರುವುದರಿಂದ ಮಳೆಯ ನೀರೆಲ್ಲಾ ತಗ್ಗುಪ್ರದೇಶದಲ್ಲಿ ನಿಂತಿದೆ. ಮಳೆ ಹೆಚ್ಚಿನ ಪ್ರಮಾಣದಲ್ಲೇ ಸುರಿದಿದ್ದರಿಂದ ಪಕ್ಕದಲ್ಲಿನ ರಸ್ತೆಯೂ ಮುಳುಗಡೆಯಾಗಿದೆ. ಭಯದಲ್ಲೇ ನೀರಿನಲ್ಲಿ ರಸ್ತೆಯನ್ನ ಹುಡುಕಿಕೊಂಡು ಕೆಲವರು ಓಡಾಡುತ್ತಿದ್ದಾರೆ. ಇನ್ನೂ ಕೆಲವರು ಮನೆಬಿಟ್ಟು ಹೊರಗೆ ಬಂದಿಲ್ಲ. ನೀರು ನಿಂತಲ್ಲೆ ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿಯೂ ಹೆಚ್ಚಾಗಿದೆ. ಕೊರೊನಾ ವೈರಸ್ ಭೀತಿಯಿಂದ ಈಗಾಗಲೇ ಕಂಗಾಲಾಗಿರುವ ಜನರಿಗೆ ಮಳೆಯಿಂದ ಇನ್ನಷ್ಟು ಆತಂಕ ಶುರುವಾಗಿದೆ.
ಕೂಡಲೇ ನೀರನ್ನ ಖಾಲಿ ಮಾಡಿ ರಾಜಕಾಲುವೆಗೆ ಚರಂಡಿ ಸಂಪರ್ಕ ಕಲ್ಪಿಸುವಂತೆ ಬೆಲ್ಲಂ ಕಾಲೋನಿ ನಿವಾಸಿಗಳು ರಾಯಚೂರು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಸದ್ಯ ರಾಯಚೂರಿನಲ್ಲಿ ಮಳೆ ನಿಂತಿದ್ದು ಇನ್ನೂ ಹೆಚ್ಚಿನ ಪ್ರಮಾಣದ ಮಳೆ ಬಂದರೆ ಇಲ್ಲಿನ ನಿವಾಸಿಗಳು ಇನ್ನೂ ಹೆಚ್ಚಿನ ತೊಂದರೆಯನ್ನ ಅನುಭವಿಸಲಿದ್ದಾರೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ನೀರನ್ನು ಖಾಲಿ ಮಾಡುವ ವ್ಯವಸ್ಥೆ ಮಾಡಬೇಕು ಅನ್ನೋದು ಇಲ್ಲಿನ ನಿವಾಸಿಗಳ ಮನವಿಯಾಗಿದೆ.
ಲಾಕ್‍ಡೌನ್ ಮಧ್ಯೆಯೂ ಪಡಿತರಕ್ಕಾಗಿ ನೂಕುನುಗ್ಗಲು
-ರಾಯಚೂರಿನಲ್ಲಿ ಬ್ಯಾರಿಕೇಡ್ ತೆಗೆದು ಓಡಾಟhttps://t.co/a9QmE4VK88#Raichur #CoronaVirus #COVID19
— PublicTV (@publictvnews) July 18, 2020