ಮುಂಬೈ: ಕೋವಿಡ್ 19 ನಿಯಮಗಳನ್ನು ಪಾಲಿಸದಿದ್ದರೆ ಮತ್ತೆ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವ ಬೆನ್ನಲ್ಲೇ ಮಹಾ ಆಘಾಡಿ ಸರ್ಕಾರ ಮತ್ತೆ ಲಾಕ್‌ಡೌನ್ ಜಾರಿಯ ಮಾತುಗಳನ್ನು ಆಡಿದೆ.
ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲ ಕೊರೊನಾ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು. ಒಂದು ವೇಳೆ ಪಾಲಿಸದೇ ಇದ್ದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಳೆದ ವಾರ ಮಹಾರಾಷ್ಟ್ರದಲ್ಲಿ ನಿತ್ಯ 3 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಭಾನುವಾರ ಒಟ್ಟು ಸೋಂಕಿತರ ಸಂಖ್ಯೆ 4 ಸಾವಿರದ ಗಡಿಯನ್ನು ದಾಟಿತ್ತು. ಸೋಂಕಿತರ ಸಂಖ್ಯೆ ಏರಿಕೆಯಾದ ನ್ನಲ್ಲೇ ಮಹಾ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಬಿಗಿ ನಿಯಮ ಜಾರಿ ಮಾಡಲು ಮುಂದಾಗಿದೆ.
ಸಕ್ರಿಯ ಪ್ರಕರಣಗಳ ಪೈಕಿ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದ್ದರೆ ಕೇರಳ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕೇರಳ 60,760, ಮಹಾರಾಷ್ಟ್ರ 37,125, ಕರ್ನಾಟಕ 5,860 ಸಕ್ರಿಯ ಪ್ರಕರಣಗಳಿವೆ.