-ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಟ್ರಾಫಿಕ್ ಜಾಮ್
ಚಿಕ್ಕಮಗಳೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಮರದ ರೀಪರ್ ತುಂಬಿಕೊಂಡಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ತಾಲೂಕಿನ ಹಿರೇಗೌಜ ಬಳಿ ನಡೆದಿದೆ. ಲಾರಿ ಪಲ್ಟಿಯಾಗಲು ಓವರ್ ಲೋಡ್ ತುಂಬಿದ್ದೆ ಕಾರಣ ಎಂದು ಶಂಕಿಸಲಾಗಿದೆ. ಲಾರಿಯ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
ಲಾರಿ ನಿರ್ಮಾಣ ಹಂತದ ಸೇತುವೆ ಪಕ್ಕದ ಮಣ್ಣಿನ ರಸ್ತೆಯಲ್ಲಿ ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಓವರ್ ಲೋಡ್ ತುಂಬಿದ್ದ ಲಾರಿಯ ಮೇಲ್ಭಾಗದಲ್ಲಿದ್ದ ಮರದ ರೀಪರ್ ಗಳು ಲಾರಿಯ ಪಕ್ಕದಲ್ಲಿ ಚಲಿಸುತ್ತಿದ್ದ ಮಾರುತಿ 800 ಕಾರಿನ ಮೇಲೆ ಬಿದ್ದು ಕಾರು ಕೂಡ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Advertisement
Advertisement
ರಾಷ್ಟ್ರೀಯ ಹೆದ್ದಾರಿ 173 ಕಡೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಕಳೆದೊಂದು ವರ್ಷದಿಂದಲೇ ಈ ಮಾರ್ಗದಲ್ಲಿ ಹೆದ್ದಾರಿ ಕಾರ್ಯ ನಡೆಯುತ್ತಿದೆ. ಅಲ್ಲಲ್ಲೇ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಪಕ್ಕದಲ್ಲಿ ವಾಹನ ಓಡಾಟಕ್ಕೆ ದಾರಿ ನಿರ್ಮಿಸಿಕೊಡಲಾಗಿದೆ. ಒಂದು ಕಿರಿದಾದ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ರಸ್ತೆ ಪಕ್ಕದಲ್ಲಿ ಲಾರಿ ಸಂಪೂರ್ಣ ತಲೆಕೆಳಗಾಗಿ ಬಿದ್ದ ಕಾರಣ ವಾಹನ ಸಂಚಾರವು ಸ್ಥಗಿತಗೊಂಡಿತ್ತು.
Advertisement
ಲಾರಿಯಲ್ಲಿದ್ದ ಟನ್ ಗಟ್ಟಲೇ ಮರದ ರೀಪರ್ ಗಳನ್ನ ತೆಗೆದು, ಜೆಸಿಬಿ ಮೂಲಕ ಲಾರಿಯನ್ನು ರಸ್ತೆಯ ಮತ್ತೊಂದು ಬದಿಗೆ ಸ್ಥಳಾಂತರಿಸಲಾಗಿದೆ. ಲಾರಿ ತಲೆಕೆಳಗಾಗಿ ಬಿದ್ದರೂ ಕೂಡ ಚಾಲಕ ಹಾಗೂ ನಿರ್ವಾಹಕನಿಗೆ ತೊಂದರೆಯಾಗಿಲ್ಲ. ಜೊತೆಗೆ ಲಾರಿಯಿಂದ ಬಿದ್ದ ಮರದ ರೀಪರ್ ಗಳು ಕಾರಿನ ಮೇಲೆ ಬಿದ್ದರೂ ಕೂಡ ಕಾರಿನಲ್ಲಿದ್ದ ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.