– ನಿಮ್ಮ ಸಮಸ್ಯೆಗಳನ್ನ ಯಾರೊಂದಿಗೂ ಹಂಚಿಕೊಳ್ಳಬೇಡಿ
ಮುಂಬೈ: ಗುರುವಾರಷ್ಟೆ ಬಾಲಿವುಡ್‍ನ ಕಿರುತೆರೆ ನಟ ಸಮೀರ್ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದೀಗ ಭೋಜ್‍ಪುರಿ ನಟಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ಸಮೀರ್ ಶರ್ಮಾ ಮೃತದೇಹ ಪತ್ತೆ
ನಟಿ ಅನುಪಮಾ ಪಾಠಕ್ (40) ಆತ್ಮಹತ್ಯೆ ಮಾಡಿಕೊಂಡ ನಟಿ. ಮುಂಬೈನ ದಹಿಸರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಆಗಸ್ಟ್ 2 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಒಂದು ದಿನ ಮೊದಲು ಅನುಪಮಾ ಫೇಸ್‍ಬುಕ್‍ನಲ್ಲಿ ಲೈವ್ ಬಂದಿದ್ದು, ನನಗೆ ಮೋಸ ಆಗಿದೆ ಮತ್ತು ಯಾರನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಮಾತನಾಡಿದ್ದರು.
“ನೀವು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುವಿರಿ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಯಾರಿಗಾದರೂ ಹೇಳಿದರೆ, ಆ ವ್ಯಕ್ತಿ ಅಥವಾ ಸ್ನೇಹಿತ ಸಮಸ್ಯೆಗಳಿಂದ ದೂರವಿರಲು ಹೇಳುತ್ತಾರೆ. ಆದರೆ ಅವರು ನಿಮ್ಮ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಆದ್ದರಿಂದ ನೀವು ಯಾರಿಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳಬೇಡಿ. ನಿಮ್ಮ ಸಾವಿನ ನಂತರ ಅವರಿಗೆ ತೊಂದರೆಯಾಗುತ್ತದೆ. ಹೀಗಾಗಿ ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಂದ ದೂರವಿರಿ” ಎಂದು ನೋವಿನಿಂದ ಹೇಳಿದ್ದಾರೆ.
ಅಲ್ಲದೇ, “ಜನರು ನಿಮ್ಮನ್ನು ಗೇಲಿ ಮಾಡುತ್ತಾರೆ ಮತ್ತು ಇತರರ ಮುಂದೆ ನಿಮ್ಮನ್ನು ಅಪಮಾನ ಮಾಡುತ್ತಾರೆ. ಆದ್ದರಿಂದ ನಿಮ್ಮ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರನ್ನೂ ನಿಮ್ಮ ಸ್ನೇಹಿತ ಎಂದು ಕೂಡ ನಂಬಬೇಡಿ. ನಾನು ಇದನ್ನು ನನ್ನ ಜೀವನದಲ್ಲಿ ಕಲಿತಿದ್ದೇನೆ. ಜನರು ತುಂಬಾ ಸ್ವಾರ್ಥಿಗಳು ಮತ್ತು ಇತರರ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಆಗಸ್ಟ್ 1 ರಂದು ಫೇಸ್‍ಬುಕ್ ಲೈವ್ ವೀಡಿಯೊದಲ್ಲಿ ಹೇಳಿದ್ದಾರೆ.
ಫೇಸ್‍ಬುಕ್ ಲೈವ್ ಬಂದ ಮರುದಿನ ಅಂದರೆ ಆಗಸ್ಟ್ 2 ರಂದು ನಟಿ ಅನುಪಮಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಪೊಲೀಸ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಒಂದು ಡೆತ್‍ನೋಟ್ ಕೂಡ ಪತ್ತೆಯಾಗಿದೆ.
ನಟಿ ಮಲಾಡ್‍ನಲ್ಲಿರುವ ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದ್ದರು. 2019ರ ಡಿಸೆಂಬರ್‌ನಲ್ಲಿ ಮೆಚ್ಯೂರಿಟಿ ದಿನಾಂಕದ ಮುಗಿದಿದೆ. ಆದರೂ ಅದನ್ನು ವಾಪಸ್ ಕೊಟ್ಟಿಲ್ಲ. ಅಲ್ಲದೇ ಸ್ನೇಹಿತನೊಬ್ಬ ಲಾಕ್‍ಡೌನ್ ಸಮಯದಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದನು. ಅದನ್ನು ವಾಪಸ್ ಕೊಟ್ಟಿಲ್ಲ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭೋಜ್‍ಪುರಿ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿ ಅನುಪಮಾ ನಟಿಸಿದ್ದಾರೆ. ಅನುಪಮಾ ಪಾಠಕ್ ಬಿಹಾರದ ಪೂರ್ನಿಯಾ ಜಿಲ್ಲೆಯವರಾಗಿದ್ದು, ಕೆಲಸಕ್ಕಾಗಿ ಮುಂಬೈನಲ್ಲಿ ನೆಲೆಸಿದ್ದರು. ಸದ್ಯಕ್ಕೆ ಪೊಲೀಸರಿಗೆ ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.