ಮುಂಬೈ: ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆ ಇದೆ ಎಂದು ಹೇಳುವ ಮೂಲಕ ಇನ್‍ಸ್ಟಾಗ್ರಾಮ್‍ನಲ್ಲಿ ಪತಿ ಧೋನಿಯ ಬಗ್ಗೆ ಸಾಕ್ಷಿ ಧೋನಿಯವರು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಶನಿವಾರ ಸಂಜೆ ಭಾರತದ ಮಾಜಿ ನಾಯಕ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಯವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 15 ವರ್ಷದ ಸುದೀರ್ಘ ಕ್ರಿಕೆಟ್ ಜೀವನಕ್ಕೆ ಮಹಿ ಬ್ರೇಕ್ ಹಾಕಿದ್ದಾರೆ. ಭಾರತಕ್ಕಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ತಂದ ಚಾಣಾಕ್ಷ ನಾಯಕ ಧೋನಿ ವಿದಾಯ ಹೇಳಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
https://www.instagram.com/p/CD60JnWHibP/?utm_source=ig_embed
ಈಗ ಪತಿಯ ನಿವೃತ್ತಿಯ ನಂತರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿರುವ ಸಾಕ್ಷಿ ಅವರು, ನಿಮ್ಮ ಸಾಧನೆಯ ಬಗ್ಗೆ ನೀವು ಹೆಮ್ಮೆ ಪಡಬೇಕು. ನಿಮ್ಮ ಆಟವನ್ನು ನೀವು ಉತ್ತಮವಾಗಿ ಆಡಿರುವುದಕ್ಕೆ ಶುಭಾಶಯಗಳು. ನೀವು ಮಾಡಿರುವ ಸಾಧನೆ ಮತ್ತು ನಿಮ್ಮ ವ್ಯಕ್ತಿತ್ವದ ಬಗ್ಗೆ ನನಗೆ ಹೆಮ್ಮೆ ಇದೆ. ನನಗೆ ಗೊತ್ತು ನೀವು ನಿಮ್ಮ ಫ್ಯಾಶನ್ ಆಗಿದ್ದ ಆಟಕ್ಕೆ ವಿದಾಯ ಹೇಳುವಾಗ ಸಂಕಟಪಟ್ಟಿದ್ದೀರಾ. ಕಣ್ಣೀರನ್ನು ಹಿಡಿದಿಟ್ಟುಕೊಂಡು ನಿವೃತ್ತಿ ಘೋಷಣೆ ಮಾಡಿದ್ದೀರಾ. ನಿಮಗೆ ಮುಂದೆ ಖುಷಿ, ಆರೋಗ್ಯ ಸಿಗಲಿ ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ಎಂಎಸ್ ಧೋನಿ ಅವರು ಸೂರ್ಯ ಮುಳುಗುವ ವೇಳೆ ಹಿಂಭಾಗವಾಗಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅಮೆರಿಕಾದ ಕವಯತ್ರಿ ಮಾಯಾ ಏಂಜೆಲೊ ಬರೆದ ಒಂದು ಸಾಲನ್ನು ಕೂಡ ಬರೆದುಕೊಂಡಿದ್ದಾರೆ. “ನೀವು ಹೇಳಿದ್ದನ್ನು ಜನರು ಮರೆತುಬಿಡುತ್ತಾರೆ. ನೀವು ಮಾಡಿದ್ದನ್ನು ಜನರು ಮರೆತುಬಿಡುತ್ತಾರೆ. ಆದರೆ ನೀವು ಅವರಿಗೆ ಫೀಲ್ ಮಾಡಿಸಿದ್ದನ್ನು ಜನರು ಎಂದಿಗೂ ಮರೆಯುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಕಳೆದ ವಿಶ್ವಕಪ್ ಸೈಮಿ ಫೈನಲ್ ಪಂದ್ಯದ ನಂತರ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಧೋನಿಯವರು, ವಿದಾಯ ಘೋಷಿಸುವ ಯಾವುದೇ ಸುಳಿವನ್ನು ನೀಡಿರಲಿಲ್ಲ. ಆದರೆ ಶನಿವಾರ ಸಂಜೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಸುದ್ದಿ ನೀಡಿದ್ದಾರೆ. ಈ ಮೂಲಕ ಧೋನಿಯನ್ನು ಮತ್ತೆ ನೀಲಿ ಜೆರ್ಸಿಯಲ್ಲಿ ನೋಡ ಬಯಸಿದ್ದ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆದರೆ ಅವರು ಈ ಬಾರಿಯ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಅಭಿಮಾನಿಗಳು ಧೋನಿಯನ್ನು ಮೈದಾನದಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.