ಬೆಂಗಳೂರು: ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ. ಅದು ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವ ಭಿಕ್ಷೆ ಎಂದು ಯಾರ‍್ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೋ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಖಡಕ್ ಸಂದೇಶವನ್ನು ನೀಡಿದ್ದಾರೆ. ಇದನ್ನೂ ಓದಿ: ಯುವ ಪೀಳಿಗೆಯನ್ನು ಡ್ರಗ್ಸ್‌ನಿಂದ ರಕ್ಷಿಸಬೇಕು: ಅನಿರುದ್ಧ
ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ಡ್ರಗ್ಸ್ ಅನ್ನೋದು ದೇಶಕ್ಕೆ, ಜಗತ್ತಿಗೆ ಮಾರಕವಾಗಿದೆ. ಡ್ರಗ್ಸ್ ಅಂದರೆ ಇಡೀ ಯುವ ಜನತೆಗೆ ಮಾರಕ. ಅದರಲ್ಲಿ ಯಾರ‍್ಯಾರು ಇದ್ದಾರೆ ಎಂಬುದನ್ನು ನೋಡಿದ್ರೆ, ಹತ್ತು ಡಿಪಾರ್ಟ್ ಮೆಂಟ್ ಇರುತ್ತೆ. ಆದರೆ ಹೈಲೈಟ್ ಆಗುವುದು ಕನ್ನಡ ಚಿತ್ರರಂಗ ಮಾತ್ರ. ಆದರೆ ಇದರಲ್ಲಿ ಇಡೀ ಚಿತ್ರರಂಗ ಅಂತ ಹೇಳಬೇಡಿ. ಯುವಕರು, ಯುವತಿಯರು, ನಮ್ಮ ರಾಜ್ಯದ ಜನರಿಗೆ ಆಗುತ್ತಿದೆ ಎಂದು ಹೇಳಿ. ಆಗ ನಾವೆಲ್ಲರೂ ಒಟ್ಟಾಗಿ ಸಮಾಜದ ಪ್ರಜೆಯಾಗಿ ಚಿಕ್ಕಮಕ್ಕಳಿಗೂ ಜಾಗೃತಿ ಮೂಡಿಸಬೇಕು ಎಂದರು.
ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ. ಅದು ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವುದು. ನಿಮ್ಮ ಪೋಷಕರು ನೀವು ಕೆಳಗೆ ಬಿದ್ದರೆ ಏನಾಗುತ್ತೋ ಎಂದು ಸಾಕಿರುತ್ತಾರೆ. ನನಗೂ ಮಕ್ಕಳಿದ್ದಾರೆ. ಪೋಷಕರು ಒಳ್ಳೆಯ ಊಟ ತಂದು ಮಕ್ಕಳಿಗೆ ಕೊಟ್ಟು ತಿನ್ನಿಸಿ ಬೆಳೆಸಿರುತ್ತಾರೆ. ಅಷ್ಟು ಕಾಳಜಿಯಿಂದ ಬೆಳೆಯಿಸಿರುವ ನಿಮ್ಮನ್ನು ಮುಂದೆ ಏನೋ ಆಗುತ್ತಾರೆ ಎಂದು ಕನಸು ಕಾಣುತ್ತಿರುತ್ತಾರೆ ಎಂದು ಯಶ್ ಹೇಳಿದರು.
ಯಾರ‍್ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೋ ಅವರಿಗೆ ಒಂದು ಮಾತನ್ನ ಹೇಳುವುದಕ್ಕೆ ಇಷ್ಟ ಪಡುತ್ತೀನಿ. ಡ್ರಗ್ಸ್ ಎಂದು ತೆಗೆದುಕೊಂಡು ಹಾಳಾಗಬೇಡಿ. ನಿಮ್ಮ ದೇಹವನ್ನು ನಿಮ್ಮ ಅಪ್ಪ, ಅಮ್ಮ ಕೊಟ್ಟಿರುವ ಭಿಕ್ಷೆ. ನಿಮಗೆ ಯಾವುದೇ ಅಧಿಕಾರ ಇಲ್ಲ. ನಿಮ್ಮ ಪೋಷಕರಿಗಾಗಿ ಒಳ್ಳೆಯ ಹೆಸರು, ಗೌರವದಿಂದ ಕೆಲಸ ಮಾಡಿ. ಇಂತಹ ದುಶ್ಚಟಗಳನ್ನು ಬಿಡಿ ಎಂದು ಯಶ್ ಖಡಕ್ ಸಂದೇಶವನ್ನು ನೀಡಿದರು.
ಚಿತ್ರೋದ್ಯಮದಲ್ಲಿ ಸಮಸ್ಯೆಗಳು ನಿರಂತರವಾಗಿ ಬರುತ್ತಿದೆ. ಮತ್ತೆ ಮತ್ತೆ ಸಮಸ್ಯೆಗಳು ಬರುತ್ತಿವೆ. ಅದನ್ನ ಪರಿಹಾರ ಮಾಡೋದು ಹೇಗೆ ಅನ್ನೋದನ್ನ ನೋಡಬೇಕು. ಭೂಮಿ ಫಲವತ್ತಾಗಿದ್ದರೆ ಬೆಳೆ ಬೆಳೆಯಬಹುದು. ಭೂಮಿನೇ ಫಲವತ್ತಾಗಿಲ್ಲ ಅಂದರೆ ಏನು ಬೆಳೆಯೋದಕ್ಕೆ ಆಗುತ್ತೆ. ಆ ಸಂದರ್ಭದಲ್ಲಿ ನಾವಿದ್ದೀವಿ. ಸಾವಿರಾರು ಕಲಾವಿದರು, ತಂತ್ರಜ್ಞರು ಕಷ್ಟ ಪಟ್ಟು ಚಿತ್ರರಂಗದಲ್ಲಿ ಹೆಸರು ಮಾಡುವುದಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಅನೇಕರು ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಬಂದವರಿಗೆ ಸರಿಯಾದ ವೇದಿಕೆ ಸಿಗುವುದಿಲ್ಲ. ಹೀಗಾಗಿ ಅಂತಹವರಿಗೆ ಒಂದು ವೇದಿಕೆ ಮಾಡಿ, ಕಲಿಯಲು ತರಬೇತಿ ಕೊಟ್ಟರೆ ಚಿತ್ರರಂಗವೂ ಕೂಡ ಸಮೃದ್ಧವಾಗಿ ಬೆಳೆಯುತ್ತದೆ ಎಂಬುದು ನನ್ನ ನಂಬಿಕೆ. ಹೀಗಾಗಿ ನಮ್ಮ ಕಡೆಯಿಂದ ಉತ್ತಮ ತಂತ್ರಜ್ಞಾನ ಹಾಗೂ ಫಿಲ್ಮಂ ಸಿಟಿ ಬಗ್ಗೆ ಸಿಎಂ ಜೊತೆಗೆ ಮಾತನಾಡಿದ್ದೇವೆ ಎಂದು ಯಶ್ ತಿಳಿಸಿದರು.