‘ನಿಮ್ಮೂರು’ ಚಿತ್ರದ ಆಡಿಯೋ ಬಿಡುಗಡೆ – ವಿಜಯ್.ಎಸ್ ನಿರ್ದೇಶನದ ಚಿತ್ರ

Public TV
1 Min Read
Nimmuru 2

ತ್ತರ ಕರ್ನಾಟಕದ ಹೊಸ ಪ್ರತಿಭೆಗಳೆಲ್ಲ ಸೇರಿ ನಿರ್ಮಾಣ ಮಾಡಿರುವ ‘ನಿಮ್ಮೂರು’ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ್ರು ಹಾಗೂ ನಟಿ ರೂಪಿಕಾ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಮಧುಸೂದನ್.ಡಿ, ಅಭಿನಂದನ್ ಕಶ್ಯಪ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿಬಂದಿವೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಎಲ್ಲರ ಗಮನ ಸೆಳೆದಿದ್ದು, ಇದೀಗ ಚಿತ್ರದ ಹಾಡುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Nimmuru 1

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ವಿಜಯ್.ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ‘ನಿಮ್ಮೂರು’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ‘ನಿಮ್ಮೂರು’ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು ತೆರೆ ಮೇಲೆ ನೋಡುತ್ತಿದ್ರೆ ಪ್ರೇಕ್ಷಕರಿಗೆ ಅವರವರ ಹುಟ್ಟೂರು ನೆನಪಾಗುತ್ತೆ ಎನ್ನುತ್ತದೆ ಚಿತ್ರತಂಡ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪ್ರತಿನಿತ್ಯ ನಡೆಯುವ ಘಟನೆಗಳೇ ಚಿತ್ರದ ಕಥಾವಸ್ತುವಾಗಿದ್ದು, ಅದನ್ನೇ ತೆರೆಮೇಲೆ ಮನೋರಂಜನಾತ್ಮಕವಾಗಿ ಕಟ್ಟಿಕೊಡಲು ಹೊರಟಿದ್ದಾರೆ ನಿರ್ದೇಶಕ ವಿಜಯ್.ಎಸ್. ಹಳ್ಳಿ ಸೊಬಗು, ಸೊಗಡು ತುಂಬಿರುವ ಈ ಚಿತ್ರದಲ್ಲಿ ಹಳ್ಳಿಯಲ್ಲಿ ನಡೆಯುವ ರಾಜಕೀಯ, ರೈತರ ಸಮಸ್ಯೆ, ಪ್ರೀತಿ ಪ್ರೇಮ ಇವೆಲ್ಲವೂ ಇದೆ. ಚಿತ್ರದಲ್ಲಿ ನಾಯಕನಾಗಿ ಲಕ್ಕಿರಾಮ್, ನಾಯಕ ನಟಿಯಾಗಿ ವೀಣಾ ಗಂಗಾಧರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

Nimmuru

76 ದಿನಗಳ ಕಾಲ ‘ನಿಮ್ಮೂರು’ ಸಿನಿಮಾ ಚಿತ್ರೀಕರಣ ನಡೆಸಲಾಗಿದ್ದು, ಕೊಳ್ಳೇಗಾಲ ಯಳಂದೂರು, ಚಾಮರಾಜನಗರ, ತಲಕಾಡು, ಸಕಲೇಶಪುರ, ರಾಣೆ ಬೆನ್ನೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದೆ. ರಾಜಶೇಖರ್ ಚಂದ್ರಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಹಠವಾದಿ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗಿದೆ. ತ್ರಿವಿಕ್ರಮ್, ಮೀಸೆ ಅಂಜಿನಪ್ಪ, ಶ್ರೀಕಾಂತ್ ಹೊನ್ನಾವಳ್ಳಿ, ಸಿದ್ದು, ಮಂಡ್ಯ, ಮಂಜುನಾಥ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಸನಿಹದಲ್ಲಿರುವ ‘ನಿಮ್ಮೂರು’ ಚಿತ್ರ ಸುಂದರ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *