– ನಾನು ವೇಷಧಾರಿಯಲ್ಲ, ಜನಸೇವಕ, ಹಗುರವಾಗಿ ಮಾತಾಡ್ಬೇಡಿ
ದಾವಣಗೆರೆ: ನಾನು ಯಾವುದೇ ವೇಷಧಾರಿಯಲ್ಲ, ನಾನೊಬ್ಬ ಜನಸೇವಕ, ಕ್ಷೇತ್ರದ ಜನರಿಗಾಗಿ ಹಗಲಿರುಳು ಸೇವೆ ಮಾಡುವವ ಎಂದು ಹೇಳುವ ಮೂಲಕ ಶಾಸಕ ಎಂ.ಪಿ.ರೇಣುಕಾಚಾರ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪಗೆ ತಿರುಗೇಟು ನೀಡಿದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ಮಾತನಾಡಿ, ರೇಣುಕಾಚಾರ್ಯ ವೇಷಧಾರಿ ಎಂಬ ಸಚಿವ ಈಶ್ವಪ್ಪ ಹೇಳಿಕೆಗೆ ಟಾಂಗ್ ನೀಡಿದರು. ಹಿರಿಯರ ಬಗ್ಗೆ ಗೌರರವಿದೆ, ನನಗೆ ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲ. ನನ್ನ ಬಗ್ಗೆ ಹುಲಿ ವೇಷ ಎಂದು ಹೇಳಿದವರು ಆತ್ಮವಲೋಕನ ಮಾಡಿಕೊಳ್ಳಲಿ. ಯಡಿಯೂರಪ್ಪನವರನ್ನು ರಾಜ್ಯಾದ್ಯಕ್ಷರಾಗಿ ಮಾಡಿದಾಗ ನೀವು ಬ್ರೀಗೇಡ್ ಕಟ್ಟಿ ಯಾವ ವೇಷ ಹಾಕಿಕೊಂಡಿದ್ದಿರಿ ಎಂಬುದು ಗೊತ್ತಿರಲಿ. ಸಚಿವರಾಗಿ ರಾಜ್ಯಪಾಲರಿಗೆ ಪತ್ರ ಬರೆದು ಆಮೇಲೆ ಉಲ್ಟಾ ಹೊಡೆದ್ರಿ, ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ನನ್ನನ್ನು ಯಡಿಯೂರಪ್ಪನವರ ವಿರುದ್ಧ ಎತ್ತಿ ಕಟ್ಟಲಿಲ್ವಾ? ನೀವು ಚುನಾವಣಾ ಪೂರ್ವದಲ್ಲಿ ಏನು ಮಾಡಿದ್ರಿ ಗೊತ್ತಿಲ್ಲವೇ? ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡಬೇಕು ಎಂದರು.
ಶಾಸಕ ಅರವಿಂದ್ ಬೆಲ್ಲದ್ ವಿರುದ್ಧ ಗುಡುಗಿದ ಅವರು, ಬೆಲ್ಲದ್ ಅವರೇ ಸುಮಾರು 65ಕ್ಕೂ ಹೆಚ್ಚು ಜನ ಶಾಸಕರು ಸಿಎಂ ಪರವಾಗಿ ಸಹಿ ಮಾಡಿರೋ ಪತ್ರ ನನ್ನ ಬಳಿ ಇದೆ. ಹಳೆ ಪತ್ರ ಎಂದು ಯಾರು ಹೇಳಿದ್ದಾರೋ ಅವರಿಗೆ ಪತ್ರ ಬೇಕಾ ಕಳುಹಿಸಿ ಕೊಡುತ್ತೇನೆ. ರಾಜ್ಯಾಧ್ಯಕ್ಷರು ಪತ್ರ ಕೊಡುವುದು ಬೇಡ ಎಂದು ಹೇಳಿದ್ದಾರೆ, ಹೀಗಾಗಿ ಕೊಟ್ಟಿಲ್ಲ. ನನ್ನ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. 2013ರಲ್ಲಿ ನೋವು ಪಟ್ಟಿದ್ದೇವೆ, ಇದು ಪದೆ ಪದೇ ಆಗಬಾರದು. ಹಡಗಿನಲ್ಲಿ ಕೂತವರೇ ರಂದ್ರ ಕೊರೆಯಬಾರದು. ನಾಯಕನ ಜೊತೆ ಎಲ್ಲರೂ ಮುಳುಗುತ್ತಾರೆ ಎಂದು ಟಾಂಗ್ ನೀಡಿದರು.