ಬೆಂಗಳೂರು: ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ. ಕೆ.ಸುರೇಶ್ ಅವರನ್ನು ಸದಾಶಿವನಗರದ ಮನೆಯಲ್ಲಿ ಭೇಟಿಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ನ ಬೆಂಗಳೂರು ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಕೇಶವ್ ಹೆಗಡೆ ಅವರು ಅಭಿಯಾನದ ಬಗ್ಗೆ ವಿವರವಾಗಿ ತಿಳಿಸಿದರು. ಜೊತೆಯಲ್ಲಿ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ಮತ್ತು ವಿಹಿಂಪ್ ಮಾಧ್ಯಮ ವಿಭಾಗದವರು ಇದ್ದರು.
ನಿಧಿ ಸಮರ್ಪಣಾ ಅಭಿಯಾನದ ಹಿನ್ನೆಲೆಯಲ್ಲಿ ಫೆ.4 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಎಚ್‌ಪಿ ಮುಖಂಡರು ಭೇಟಿ ಮಾಡಿದ್ದರು. ವಿಶ್ವ ಹಿಂದೂ ಪರಿಷದ್‌ನ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ಮತ್ತು ರಂಗಣ್ಣ ಭೇಟಿ ಮಾಡಿ ಅಭಿಯಾನದ ಬಗ್ಗೆ ತಿಳಿಸಿದ್ದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ದೇಶಾದ್ಯಂತ ಮನೆ ಮನೆಗೆ ತೆರಳಿ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಆರ್‌ಎಸ್‌ಎಸ್, ವಿಎಚ್‌ಪಿ ಸೇರಿದಂತೆ ಹಿಂದೂಪರ ಸಂಘಟನೆಗಳ ನಾಯಕರು ಮನೆ ಮನೆಗೆ ಭೇಟಿ ನೀಡಿ ನಿಧಿ ಸಂಗ್ರಹಣೆ ಮಾಡುತ್ತಿದ್ದಾರೆ.