ನಿದ್ದೆಗೆ ಜಾರಿದ್ದ ಪತ್ನಿಯ ತಲೆಗೆ ಹಾರೆಯಿಂದ ಹೊಡೆದು ಕೊಂದ!

Public TV
2 Min Read
Ramanagara women

– ಕೊಲೆ ಬಳಿಕ ಮಕ್ಕಳಿಗೆ ತಿಳಿಯದಂತೆ ಎಸ್ಕೇಪ್

ರಾಮನಗರ: ತವರು ಮನೆಗೆ ಹೋಗಿ ವಾಸಪ್ ಬಂದಿದ್ದ ಪತ್ನಿಯನ್ನು ಹಾರೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಹಾರೋಹಳ್ಳಿಯ ಭಣದೇಗೌಡನದೊಡ್ಡಿಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಮಮತಾ(32) ಎಂದು ಗುರುತಿಸಲಾಗಿದೆ. ಈಕೆಯನ್ನು ಪತಿ ಚಂದಾವರೆಗೌಡ(40) ಕೊಲೆ ಮಾಡಿದ್ದಾನೆ. ಮೃತ ಮಹಿಳೆ ದೊಡ್ಡಕಲ್ಲುಬಾಳು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು.

Police Jeep

18 ವರ್ಷಗಳ ಹಿಂದೆ ಮಮತಾ ಚಂದಾವರೆಗೌಡನನ್ನು ಮದುವೆ ಆಗಿದ್ದರು. ದಂಪತಿಗೆ ಓರ್ವ ಮಗ ಹಾಗೂ ಮಗಳು ಇದ್ದಾರೆ. ಮಮತಾ ಪತಿ ಮದ್ಯವ್ಯಸನಿಯಾಗಿದ್ದು, ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ. ಕುಡಿದ ಅಮಲಿನಲ್ಲಿ ಹೆಂಡತಿಯ ಜೊತೆಗೆ ಆಗಾಗ ಜಗಳವಾಡುತ್ತಿದ್ದನು.

ಗಂಡ-ಹೆಂಡತಿಯ ಈ ಹಿಂದೊಮ್ಮೆ ಜಗಳ ಮಾಡಿಕೊಂಡಿದ್ದರು. ಆಗ ಈತ ಪತ್ನಿಗೆ ಚಿತ್ರಹಿಂಸೆ ನೀಡಿದ್ದನು. ಇದರಿಂದ ಮನನೊಂದ ಮಮತಾ ಅದೇ ಗ್ರಾಮದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದರು. ಊರಿನ ಹಿರಿಯರು ಪಂಚಾಯ್ತಿ ಮಾಡಿದ ಬಳಿಕ ಮತ್ತೆ ಗಂಡನ ಮನೆಗೆ ವಾಪಸ್ ಬಂದಿದ್ದರು.

police 1 e1585506284178 4 medium

ಕೊಲೆಗೆ ಕಾರಣ:
ತನ್ನ ಜೊತೆ ಜಗಳವಾಡಿ ತವರು ಮನೆಗೆ ಹೋಗಿದ್ದರು ಎಂಬ ಕೋಪ ಗಂಡನಿಗೆ ಇತ್ತು. ಇದೇ ವಿಚಾರವನ್ನು ಇಟ್ಟುಕೊಂಡು ಚಂದಾವರೆಗೌಡ ಪತ್ನಿ ನಿದ್ದೆಗೆ ಜಾರುವವರೆಗೆ ಕಾದಿದ್ದಾನೆ. ಮಮತಾಗೆ ನಿದ್ದೆ ಬಂದ ಬಳಿಕ ತಲೆಗೆ ಹಾರೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಕೃತ್ಯ ಎಸಗಿ ಮನೆಯಲ್ಲಿರುವ ಮಕ್ಕಳಿಗೂ ತಿಳಿಯದಂತೆ ರಾತ್ರಿಯೇ ಪರಾರಿಯಾಗಿದ್ದಾನೆ.

husband wife

ಕೊಲೆ ವಿಚಾರ ತಿಳಿದದ್ದು ಹೇಗೆ:
ಬೆಳಗ್ಗೆ ಎಂದಿನಂತೆ ಎದ್ದ ಮಗ, ಹಸುಗಳಿಗೆ ನೀರು ಕುಡಿಸಿ ಹೊರಗೆ ಕಟ್ಟಿಹಾಕಿದನು. ಅಮ್ಮ ಎಲ್ಲಿ ಹೋದಳು ಎಂದು ಹುಡುಕುತ್ತಾ ಮನೆ ಒಳಗೆ ಬಂದು ಅಮ್ಮ ಯಾಕಿನ್ನು ಮಲಗಿದ್ದೀಯಾ? ಟೈಂ ಆಗಿದೆ ಎನ್ನುತ್ತಾ ಹತ್ತಿರ ಬಂದಿದ್ದಾನೆ. ಅಮ್ಮನನ್ನು ನೋಡಿ ಜೋರಾಗಿ ಚೀರಾಡಿದ್ದಾನೆ. ನೆರೆಹೊರೆಯವರು ಬಂದು ನೋಡಿದಾಗ ಮಹಿಳೆ ಕೊಲೆಯಾಗಿರುವುದು ತಿಳಿದಿದೆ. ಆಗ ಸ್ಥಳೀಯರು ಗ್ರಾಮಾಂತರ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.

ಕನಕಪುರ ಸಿಪಿಐ ಪ್ರಕಾಶ್, ಗ್ರಾಮಾಂತರ ಠಾಣೆ ಎಸ್‍ಐ ಅನಂತರಾಮ್, ಎಎಸ್‍ಐ ರುದ್ರಪ್ಪ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *