ಚಿತ್ರದುರ್ಗ: ಪ್ರತಿ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆಯೂ ನಿರಾಸೆ ಅನುಭವಿಸಿ, ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುನಿಸಿಕೊಳ್ಳುವ ಚಿತ್ರದುರ್ಗದ ಹಿರಿಯ ಶಾಸಕ ತಿಪ್ಪಾರೆಡ್ಡಿಯನ್ನು ದೇವರಾಜ್ ಅರಸು ನಿಗಮದ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಸಮಾಧಾನ ಪಡಿಸುವ ಸಿಎಂ ತಂತ್ರಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ನನ್ನಂತಹ ಹಿರಿಯ ಶಾಸಕನನ್ನು ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಿಸಿ, ಸಿಎಂ ಯಡಿಯೂರಪ್ಪ ನನಗೆ ಅವಮಾನ ಮಾಡಿದ್ದಾರೆ. ನಾನು 1998 ರಲ್ಲೇ ಹೌಸಿಂಗ್ ಬೋರ್ಡ್ ಅಧ್ಯಕ್ಷ ಆಗಿದ್ದೆ. ಯಾವ ಆಧಾರದ ಮೇಲೆ ದೇವರಾಜ ಅರಸು ನಿಗಮ ಮಂಡಳಿಯ ಅಧ್ಯಕ್ಷಗಿರಿ ನೀಡಿದ್ದಾರೋ ಗೊತ್ತಿಲ್ಲ. ನಾನು ಈಗಾಗಲೇ ಆರು ಬಾರಿ ಗೆದ್ದಿದ್ದೇನೆ. ಅಲ್ಲದೆ 40-50 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಆದರೂ ಈ ಅಧ್ಯಕ್ಷ ಸ್ಥಾನ ನನಗೇಕೆ ಕೊಟ್ಟರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಾನು 6 ಬಾರಿ ಗೆದ್ದಿದ್ದೇನೆಂಬುದು ಬಿಟ್ಟರೆ ಹೆಚ್ಚೇನು ಹೇಳಿಕೊಳ್ಳುವ ಅಗತ್ಯವಿಲ್ಲ. ರಾಜಕೀಯಕ್ಕೆ ಬಂದಿದ್ದೇ ಮೊದಲನೇ ತಪ್ಪು ಎಂಬ ಭಾವನೆ ಮೂಡಿದ್ದು, ಸಿಎಂ ನನ್ನ ಬಗ್ಗೆ ಯಾವ ಭಾವನೆ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಇನ್ನೂ ಎರಡೂವರೆ ವರ್ಷ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದರು.
Advertisement
ಈ ಎಲ್ಲ ಬೆಳವಣಿಗೆಗಳು ಆಗುತ್ತಿದ್ದಂತೆ ಸಿಎಂ ಬಿ.ಎಸ್.ಯಡಿಯೂರಪ್ಪನವರು ಶಾಸಕ ತಿಪ್ಪಾರೆಡ್ಡಿಗೆ ಕರೆ ಮಾಡಿ ಮಾತನಾಡಿದ್ದು, ದೇವರಾಜ ಅರಸು ಅಭಿವೃದ್ಧಿ ನಿಗಮ ಅಧ್ಯಕ್ಷ ನೇಮಕಾತಿ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೆ ವೈಯಕ್ತಿಕವಾಗಿ ನಿಮ್ಮೊಂದಿಗೆ ಮಾತನಾಡುವೆ ಎಂದು ಸಿಎಂ ತಿಳಿಸಿದ್ದಾರೆ. ನಾನು ಕೂಡ ಸರಿ ಎಂದು ತಿಳಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ, ನಳೀನ್ ಕುಮಾರ್ ಕಟೀಲ್ ಹಾಗೂ ಬಿ.ಎಸ್. ಯಡಿಯೂರಪ್ಪನವರ ಅವಧಿಯಲ್ಲಿ ಶಾಸಕನಾಗಿರುವುದೇ ಒಂದು ಗೌರವ. ಹೀಗಾಗಿ ಪಕ್ಷದ ಆದೇಶದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ.
Advertisement
ಸಿಎಂ ಭೇಟಿ ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ಏನಾಗುತ್ತೆ ನೊಡೋಣ. ನನ್ನ ಹಿರಿತನಕ್ಕೆ ಸೂಕ್ತ ಸ್ಥಾನಮಾನ, ಗೌರವ ಸಿಗಲಿಲ್ಲ ಎಂಬ ಬೇಸರವಿದೆ. ಮಂತ್ರಿಗಿರಿ, ಅಧಿಕಾರ ಸಿಗಲಿಲ್ಲ ಎಂಬ ವ್ಯಥೆ ನನಗೆ ಇಲ್ಲ. ಹೀಗಾಗಿ ಸಿಎಂ ಬಳಿ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.