– ಕಾರಿನ ಮುಂಭಾಗದಿಂದ ಒಳ ಬಂದ ಮರದ ದಿಣ್ಣೆಗಳು
ಚಿಕ್ಕಮಗಳೂರು: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಗ್ರಾಮದ ಬಳಿ ನಡೆದಿದೆ.
ಸಿಲ್ವರ್ ಮರಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮರದ ದಿಣ್ಣೆಯನ್ನು ತುಂಬಿಕೊಂಡು ಮೂಕ್ತಿಹಳ್ಳಿ ಸಮೀಪ ರಸ್ತೆ ಬದಿ ನಿಂತಿತ್ತು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಕಾರು ಡಿಕ್ಕಿಯಾದ ರಭಸಕ್ಕೆ ಟ್ರ್ಯಾಕ್ಟರ್ ನಲ್ಲಿ ಲೋಡ್ ಮಾಡಿದ ಮರದ ತುಂಡುಗಳು ಕಾರಿನ ಮುಂಭಾಗದ ಗಾಜನ್ನು ಒಡೆದು ಒಳ ಬಂದಿದೆ. ಕಾರಿನಲ್ಲಿ ಮೂವರು ಸಂಚರಿಸುತ್ತಿದ್ದರು. ಗುದ್ದಿದ ರಭಸಕ್ಕೆ ಮೂವರಿಗೂ ಗಾಯವಾಗಿದ್ದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೀಡಾದ ಕಾರಿನಲ್ಲಿದ್ದ ಮೂವರು ಮಂಗಳೂರು ಮೂಲದವರಾಗಿದ್ದಾರೆ. ಅಡಿಕೆ ವ್ಯಾಪಾರಕ್ಕೆಂದು ಚಿಕ್ಕಮಗಳೂರಿಗೆ ಬಂದವರೆಂದು ತಿಳಿದು ಬಂದಿದೆ. ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.