ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಕೇವಲ ಸಿಡಿ ಬಗ್ಗೆ ಮಾತ್ರ ಚರ್ಚೆ ನಡೆಯಲಿಲ್ಲ. ಮಾನಹಾನಿ ಭಯದಲ್ಲಿ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದ ಆರು ಸಚಿವರ ವಿರುದ್ಧವೂ ಕಾಂಗ್ರೆಸ್ ಅಸ್ತ್ರ ಝಳಪಿಸಿತು.
ಯಾವುದೇ ಆರೋಪಗಳು ಕೇಳಿಬರದೇ ಇದ್ದರೂ ಕೋರ್ಟ್‍ಗೆ ಹೋದ ಆರು ಸಚಿವರ ತಲೆದಂಡ ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಆರು ಜನಕ್ಕೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ಯಾವುದೇ ನೈತಿಕತೆ ಇಲ್ಲ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳದವರು ಇನ್ನು ಜನರನ್ನು ಹೇಗೆ ರಕ್ಷಣೆ ಮಾಡಿಕೊಳ್ತಾರೆ? ಅವರು ಬೇಕಿದ್ರೆ ಸ್ಟೇ ತಂದುಕೊಳ್ಳಲಿ? ನನ್ನ ತಕರಾರಿಲ್ಲ. ಆದರೆ ಅವರು ತನಿಖೆ ಮುಗಿಯೋವರೆಗೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಆರು ಜನ ಮಾತ್ರ ಏಕೆ ಕೋರ್ಟ್‍ಗೆ ಹೋಗಿದ್ದಾರೆ? ಗೋಪಾಲಯ್ಯ, ಬೊಮ್ಮಾಯಿ ಏಕೆ ಹೋಗಲಿಲ್ಲ. ಈಶ್ವರಪ್ಪ ಯಾಕೆ ಹೋಗಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದಕ್ಕೆ ಸಚಿವರಾದ ಶಿವರಾಂ ಹೆಬ್ಬಾರ್, ಸೋಮಶೇಖರ್, ನಾರಾಯಣಗೌಡ ಆಕ್ಷೇಪಿಸಿದರು. ನಾವು ಸರ್ಕಾರ ಉರುಳಿಸಿದ್ವಿ ಎಂಬ ಕಾರಣಕ್ಕೆ ನಮ್ಮ ವಿರುದ್ಧ ಷಡ್ಯಂತ್ರ್ಯ ನಡೆಯುತ್ತಿದೆ. ಹೀಗಾಗಿ ನಮ್ಮ ವಿರುದ್ಧ ಸುಳ್ಳು ಆಪಾದನೆಗಳು ಬರಬಾರದು ಎಂಬ ಕಾರಣಕ್ಕೆ ಕೋರ್ಟ್‍ಗೆ ಹೋಗಿದ್ದಾಗಿ ಸಮರ್ಥಿಸಿಕೊಂಡರು.
ಪೊಲೀಸರ ಮೊರೆ ಏಕೆ ಹೋಗಲಿಲ್ಲ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ನಮ್ಮಿಷ್ಟ ಎಂದು ಹೆಬ್ಬಾರ್ ತಿರುಗೇಟು ನೀಡಿದರು. ಇದರಿಂದ ಗರಂ ಆದ ಸಿದ್ದರಾಮಯ್ಯ, ನೀವು ನಮ್ಮಿಷ್ಟ ಎಂದು ಹೇಳುವಂತಿಲ್ಲ. ನೀವು ಸಚಿವ ಸ್ಥಾನದಲ್ಲಿದ್ದೀರಿ. ಸ್ಪಷ್ಟನೆ ನೀಡಬೇಕು ಎಂದರು.
ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಮಾತನಾಡಿ, ನಿಮಗೆ ಕೋರ್ಟ್‍ಗೆ ಹೋಗಲು ಸಲಹೆ ಕೊಟ್ಟಿದ್ಯಾರು? ಅವರು ಶುದ್ಧ ದಡ್ಡರು ಅಥವಾ ನಿಮ್ಮ ಏಳಿಗೆ ಸಹಿಸದವರು ಅಂತ ಕಿಚಾಯಿಸಿದರು. ಇದಕ್ಕೆ ಗರಂ ಆದ ಸೋಮಶೇಖರ್, ಇವ್ರೇನು ಸತ್ಯಹರಿಶ್ಚಂದ್ರರಾ ಎಂದು ವಾಗ್ದಾಳಿ ನಡೆಸಿದರು. ಸುಧಾಕರ್ ಸಿಟ್ಟಾಗಿ ನಾವೇನು ತಪ್ಪು ಮಾಡಿದ್ದೇವೆ? ರೇಪ್ ಮಾಡಿದ್ದೀವಾ ಎಂದು ಪ್ರಶ್ನಿಸಿ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದರು.