– ಯಾರನ್ನೂ ಲವ್ ಮಾಡಬೇಡಿ
– ಪ್ರೀತಿ ನಿರಾಕರಿಸಿದ್ದಕ್ಕೆ ಸೆಲ್ಫಿ ವಿಡಿಯೋ ಮಾಡಿ ಸೂಸೈಡ್
ಹೈದರಾಬಾದ್: ಯುವತಿಯೊಬ್ಬಳು ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸಪ್ತಗಿರಿ ಕಾಲೋನಿಯ ನಿವಾಸಿ ಸಾಯಿ ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿ. ಗೆಳತಿ ತನ್ನ ಪ್ರೀತಿಯನ್ನು ಒಪ್ಪದೆ ಮೋಸ ಮಾಡಿದ್ದಾಳೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೂಸೈಡ್ ಮಾಡಿಕೊಳ್ಳುವ ಮೊದಲು ಸಾಯಿ ಸೆಲ್ಫಿ ವಿಡಿಯೋ ಮಾಡಿ ನಂತರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಸಾಯಿ ಕೆಲವು ತಿಂಗಳಿನಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇತ್ತೀಚೆಗೆ ಆಕೆಗೆ ಪ್ರಪೋಸ್ ಕೂಡ ಮಾಡಿದ್ದನು. ಆದರೆ ಆ ಹುಡುಗಿ ಸಾಯಿ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಪ್ರೀತಿಯಲ್ಲಿ ಮೋಸ ಹೋದೆ ಎಂದು ಮೂರು ದಿನಗಳ ಹಿಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳೀಯರು ತಕ್ಷಣ ಗಮನಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅಂದಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಸಾಯಿ ಸಾವನ್ನಪ್ಪಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಸಾಯಿಯ ಫೋನ್ ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋ ಮಾಡಿರುವುದು ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ಕಾರಣ ಪ್ರೀತಿ, ಹೀಗಾಗಿ ಯಾರನ್ನೂ ಪ್ರೀತಿಸಬೇಡಿ ಎಂದು ತನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಹೇಳಿದ್ದಾನೆ.
ಜೊತೆಗೆ ನಾವು ಸಾಯುವವರೆಗೂ ನಮ್ಮೊಂದಿಗಿರುವವರನ್ನು ಪ್ರೀತಿಸುವಂತೆ ಹೇಳಿದ್ದು, ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೆ ವಿದಾಯ ಹೇಳಿದ್ದಾನೆ. ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.