ಬೆಳಗಾವಿ: ನಾವು ಸಾಬ್ರು ಹೊಸ ಕಾರು ತಗೊಳ್ಳೋಕೆ ಅಲ್ಲ. ಗುಜರಿಯಲ್ಲಿ ಸಾಮಾನು ತಂದು ಕಾರು ಮಾಡ್ತೀವಿ ಎಂದು ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ಪಕ್ಷ ತೊರೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನದೇ ಆದ ಪಕ್ಷ ಕಟ್ಟಲು ನನ್ನ ಹತ್ತಿರ ಶಕ್ತಿಯೂ ಇಲ್ಲ, ದುಡ್ಡೂ ಇಲ್ಲ. ಮಹಾತ್ಮ ಗಾಂಧಿಯನ್ನು ಚುನಾವಣೆಗೆ ನಿಲ್ಲಿಸಿದರೂ ಐದು ಕೋಟಿ ಬೇಕು. ಗಾಂಧಿ ಚುನಾವಣೆಗೆ ನಿಂತಿದ್ದಾರೆ ಅಂತ ಹೇಳೋಕೆ ಐದು ಕೋಟಿ ಬೇಕು. ಆ ವ್ಯವಸ್ಥೆ ಹಾಳು ಮಾಡಿ ಇಟ್ಟಿದ್ದಾರೆ, ಇರೋ ವ್ಯವಸ್ಥೆ ನೋಡಿಕೊಳ್ಳಬೇಕು ಎಂದರು.
ಸರ್ವರಿಗೂ ಸಮಪಾಲು, ಸರ್ವರಿಗೆ ಸಮಬಾಳು ಬಸವತತ್ವ ಆಧಾರ ಮೇಲೆ ನಾವು ರಾಜಕಾರಣ ಶುರು ಮಾಡಿದವರು ನಾವು. ಅಹಿಂದ ಮಾಡಿದಾಗಲೂ ಬಸವತತ್ವವೇ, ನಾವು ಸಾಬ್ರು ಹೊಸ ಕಾರು ತಗೊಳ್ಳೋಕೆ ಅಲ್ಲ. ಗುಜರಿಯಲ್ಲಿ ಸಾಮಾನು ತಂದು ಕಾರು ಮಾಡ್ತೀವಿ. ಒಳ್ಳೆಯ ಗೇರ್‍ಬಾಕ್ಸ್, ಇಂಜಿನ್, ಬ್ರೇಕ್ ಸೇರಿಸಿ ಒಂದು ಗಾಡಿ ಮಾಡ್ತೀವಿ. ಹೀಗಾಗಿ ಎಲ್ಲಾ ಪಕ್ಷದಲ್ಲಿ ಉತ್ತಮರಿದ್ದು, ಉತ್ತಮರ ಸಂಘಕ್ಕೆ ನಮ್ಮ ಪ್ರಯತ್ನ ಎಂದು ಹೇಳಿದರು.
ಎಲ್ಲಿ ಕಟ್ಟೆ ಇದೆ ಭದ್ರವಾದ ಬುನಾದಿ ಇದೆ ಅದನ್ನ ನೋಡಿಕೊಳ್ಳಬೇಕು. ಕಾಂಗ್ರೆಸ್ಸಿನವರು ಸರಿಪಡಿಸಿಕೊಳ್ಳಲು ಒಂದು ಅವಕಾಶ ಕೊಟ್ಟಿದ್ದೇವೆ. ಜೆಡಿಎಸ್ ಪಕ್ಷದವರ ಜೊತೆಯೂ ಮಾತನಾಡಿದ್ದೇನೆ. ದೇವೇಗೌಡರು ಹಾನೆಸ್ಟ್ ರಾಜಕಾರಣಿ ಅವರಿಗೂ ಗೌರವ ಕೊಡುತ್ತಾ ಬಂದಿದ್ದೀನಿ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಜೊತೆ ಮಾತುಕತೆ ಆಗಿದೆಯಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಎಲ್ಲಾದರೂ ಉಂಟೇ? ಬಿಜೆಪಿಯವರು ಕೇಶವ ಕೃಪಾ, ನಾವು ಬಸವ ಕೃಪಾ. ಬಿಜೆಪಿ ಮುಖಂಡರಷ್ಟೇ ಅಲ್ಲ ಎಲ್ಲರನ್ನೂ ಭೇಟಿಯಾಗುತ್ತಿರುವೆ. ನನಗೆ ಆರ್‍ಎಸ್‍ಎಸ್ ಅಲರ್ಜಿ, ಆ ಅಲರ್ಜಿಯಿಂದ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.