– ಬೆಂಗ್ಳೂರಿನಲ್ಲಿ ಭಯಪಡುವ ವಾತಾವರಣವಿಲ್ಲ
ಹಾಸನ: ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ನಾವು ಎಲ್ಲದ್ದಕ್ಕೂ ದಾಖಲೆ ಕೊಡುತ್ತೇವೆ ಎಂದು ಸಚಿವ ಶಿವರಾಮ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು ಮಾಧ್ಯಮದ ವಿರುದ್ಧವೂ ವ್ಯಂಗ್ಯವಾಡಿದ್ದು, ಟಿವಿ ನೋಡುವುದನ್ನು ಪಾಲಕರು ಬಂದ್ ಮಾಡಿದರಿಂದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿಯಿತು. ಇಲ್ಲವಾದರೆ ಕಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಏನೋ ಆಗಿಬಿಡುತ್ತೆ ಎಂದು ದೂರದರ್ಶನದಲ್ಲಿ ತೋರಿಸುತ್ತಾರೆ. ಅದನ್ನು ನೋಡಿದ ನಿಮಗೆಲ್ಲ ಬೆಂಗಳೂರಿನಲ್ಲಿದ್ದವರ ನಿಮ್ಮ ಸಂಬಂಧಿಕರ ಬಗ್ಗೆ ಭಯ ಆಗುತ್ತೆ. ಅಂತಹ ಯಾವುದೇ ಭಯಪಡುವ ವಾತಾವರಣ ಬೆಂಗಳೂರಿನಲ್ಲಿ ಇಲ್ಲ. ಬೆಂಗಳೂರಿನಲ್ಲಿ ವ್ಯವಸ್ಥಿತವಾದ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಬರುತ್ತೆ ಎಂಬುದು ಗೊತ್ತಿಲ್ಲದ ಕಾರಣ ಸಿದ್ಧತೆ ಮಾಡಿಕೊಳ್ಳಲು ವಿಳಂಬವಾಗಿತ್ತು. ಈಗ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸಮರ್ಥವಾಗಿ ಕೊರೊನಾಗೆ ಕಡಿವಾಣ ಹಾಕುವ ಪ್ರಯತ್ನ ಆಗಿದೆ. ಜೊತೆಗೆ ಕೋವಿಡ್-19 ಜೊತೆಗೆ ನಾವು ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಸಚಿವ ಹೆಬ್ಬಾರ್ ತಿಳಿಸಿದರು.