ಬೆಂಗಳೂರು: ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರಿ ಬಸ್ ಸಾಗುವ ಮಾರ್ಗಗಳಲ್ಲಿ ಖಾಸಗಿ ಬಸ್ ಓಡಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾಳೆ ಸ್ವ ಇಚ್ಛೆಯಿಂದ ಕೆಲಸಕ್ಕೆ ಬರುವ ನೌಕರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮತ್ತು ಬಸ್ ಗಳಿಗೆ ಯಾವುದೇ ಹಾನಿಯಾಗದಂತೆ ನೊಡಿಕೊಳ್ಳಲು ಪೊಲೀಸರ ಸಹಕಾರ ಕೇಳಿದ್ದೇವೆ. ನೌಕರರ ಮುಷ್ಕರ ಅತಿರೇಕಕ್ಕೆ ಹೋದರೆ ಎಸ್ಮಾ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಕೋವಿಡ್‍ನಿಂದ ನಾವು ಸಾಕಷ್ಟು ನಷ್ಟ ಅನುಭವಿಸಿದ್ದೇವೆ.ಇಂತಹ ಸಂದರ್ಭದಲ್ಲಿ ನೌಕರರು ಮುಷ್ಕರ ನಡೆಸುವುದು ಸರಿಯಲ್ಲ ಎಂದರು.
Advertisement
Advertisement
ಪರ್ಯಾಯ ವ್ಯವಸ್ಥೆಗಳಲ್ಲಿ ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್ಸ್, ಟ್ಯಾಕ್ಸಿಗಳು ಇರುತ್ತವೆ. ಪ್ರಯಾಣ ದರದ ಬಗ್ಗೆ ಇಂದು ಸಂಜೆಯೊಳಗೆ ಕಮೀಷನರ್ ನಿರ್ಧಾರ ಮಾಡುತ್ತಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ನಂಬಿ ಸುಮಾರು 20 ಲಕ್ಷ ಜನರು ಓಡಾಡುತ್ತಾರೆ. ಹೀಗಾಗಿ ಸಂಪೂರ್ಣ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಪ್ರಯಾಣಿಕರು ತಾಳ್ಮೆಯಿಂದ ಸಹಕರಿಸಿ ಎಂದು ಮನವಿ ಮಾಡಿದರು.
Advertisement
Advertisement
ನಾವು ಈ ಕುರಿತು ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಿದ್ದೇವೆ. ನಿನ್ನೆ ಬಿಎಂಟಿಸಿ ಒಕ್ಕೂಟದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರಿಗೆ ಎಲ್ಲಾ ವಿಷಯವನ್ನು ಸ್ಪಷ್ಟಪಡಿಸಿದ್ದೇವೆ. ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಸ್ವೀಕರಿಸಿ ಅದಕ್ಕೆ ಚಾಲನೆ ನೀಡಿದ್ದೇವೆ. 6ನೇ ವೇತನ ಆಯೋಗವನ್ನು ಈಗ ಜಾರಿಗೊಳಿಸಲು ಸಾಧ್ಯವಿಲ್ಲ. ವೇತನ ಹೆಚ್ಚಳದ ಬಗ್ಗೆ ಎಲೆಕ್ಷನ್ ಕಮೀಷನ್ ಸ್ಪಷ್ಟೀಕರಿಸಿದ ಮೇಲೆ ಮಾಹಿತಿ ನೀಡಲಾಗುತ್ತದೆ ಎಂದು ಇಂದು ಸಿಎಂ ಜೊತೆ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.
ಕೊರೋನಾ ಸಮಯದಲ್ಲಿ ನಮ್ಮ ಸಾರಿಗೆ ಇಲಾಖೆಗೆ ತುಂಬಾ ನಷ್ಟವಾಗಿದೆ. ಹೀಗಾಗಿ ಮುಷ್ಕರಗಳನ್ನೆಲ್ಲ ಮಾಡಬೇಡಿ ಎಂದು ನೌಕರರಲ್ಲಿ ಮನವಿ ಮಾಡಿದ್ದೇವೆ. ಅಲ್ಲದೇ ಕೆಲಸ ಮಾಡದವರಿಗೆ ವೇತನ ನೀಡುವುದಿಲ್ಲ ಎಂದು ಸೂಚನೆ ನೀಡಿದ್ದೇವೆ. ನೌಕರರು ಮುಷ್ಕರ ನಿಲ್ಲಿಸದೇ ಹೋದರೆ ಪರ್ಯಾಯ ವ್ಯವಸ್ಥೆ ಅನಿವಾರ್ಯವಾಗುತ್ತದೆ. ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಶಿಖಾ ತಿಳಿಸಿದರು.