– ಬಂಗಾರಪೇಟೆ ತಹಶೀಲ್ದಾರ್ ಹತ್ಯೆಗೆ ಖಂಡನೆ
ಬೆಂಗಳೂರು: ಕೋಲಾರದ ಬಂಗಾರಪೇಟೆಯಲ್ಲಿ ನಡೆದ ತಹಶೀಲ್ದಾರ್ ಅವರ ಹತ್ಯೆಯನ್ನು ಖಂಡಿಸಿ ನಾಳೆ ಒಂದು ದಿನ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ಮಾಡಲು ರಾಜ್ಯ ಕೆಎಎಸ್ ಅಧಿಕಾರಿಗಳ ಸಂಘ ತೀರ್ಮಾನಿಸಿದೆ.
ಇಂದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೊಡ್ಡಕಳವಂಚಿ ಗ್ರಾಮಕ್ಕೆ ಸರ್ವೇಗೆಂದು ಹೋಗಿದ್ದ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವರನ್ನು ನಿವೃತ್ತ ಶಿಕ್ಷಕನೋರ್ವ ಚಾಕು ಹಾಕಿ ಕೊಲೆ ಮಾಡಿದ್ದ. ಈ ವಿಚಾರವಾಗಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ಮಾಡಲು ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ವತಿಯಿಂದ ನಿರ್ಧಾರ ಮಾಡಲಾಗಿದೆ.
ಈ ವಿಚಾರವಾಗಿ ಸುತ್ತೋಲೆ ಹೊರಡಿಸಿರುವ ಸಂಘ, ಕರ್ತವ್ಯಕ್ಕೆ ತೆರಳಿದ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವರನ್ನು ಕೊಲೆ ಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದೆ. ಜೊತೆಗೆ ಅವರ ಕುಟುಂಬಕ್ಕೆ ಅವರ ಸಾವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೇಳಿಕೊಂಡಿದೆ. ಚಂದ್ರಮೌಳೇಶ್ವರ್ ಅವರ ಸಾವನ್ನು ಖಂಡಿಸಿ ನಾಳೆ ಒಂದು ದಿನ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಾಹಿಸುವ ಮೂಲಕ ಸಂಕೇತಿಕವಾಗಿ ಪ್ರತಿಭಟನೆ ಮಾಡಿ, ಜನರಿಗೆ ಅನಾನುಕೂಲವಾಗದಂತೆ ಕೆಲಸ ಮಾಡಲು ಸಂಘ ತೀರ್ಮಾನಿಸಿದೆ.
ಇದೇ ವೇಳೆ ಈ ಘಟನೆ ತಿಳಿದು ತಕ್ಷಣ ಸ್ಪಂದಿಸಿ ಮೃತ ತಹಶೀಲ್ದಾರ್ ಅಂತ್ಯ ಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಿರುವ, ಜೊತೆಗೆ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಹಾಗೂ ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಹುದ್ದೆಯನ್ನು ನೀಡಲು ಘೋಷಣೆ ಮಾಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು ಎಂದು ಸಂಘ ತಿಳಿಸಿದೆ.