ರಾಯಚೂರು: ಗ್ರೀನ್‍ಝೋನ್ ನಲ್ಲಿದ್ದ ರಾಯಚೂರು ಜಿಲ್ಲೆಯಲ್ಲಿ ಒಂದೇ ಬಾರಿಗೆ ಆರು ಪ್ರಕರಣಗಳು ದಾಖಲಾಗಿವೆ. ನಗರದ ಆಟೋನಗರ ಕಾಲೋನಿಯ ಒಂದೇ ಕುಟುಂಬದ ಮೂರು ಜನ ಹಾಗೂ ಯರಮರಸ್ ಕ್ವಾರಂಟೈನ್ ಕೇಂದ್ರದಲ್ಲಿದ್ದ ಸುಲ್ತಾನಪುರದ ಓರ್ವನಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ನಾಳೆ ಒಂದು ದಿನ ರಾಯಚೂರು ನಗರವನ್ನ ಸಂಪೂರ್ಣ ಬಂದ್ ಮಾಡಲಾಗುತ್ತಿದೆ.
ಸರ್ಕಾರಿ ಕಚೇರಿ, ವೈದ್ಯಕೀಯ ಸೇವೆ, ಪೆಟ್ರೋಲ್, ಔಷಧಿ ಮಳಿಗೆ ಹೊರತು ಪಡಿಸಿ ಎಲ್ಲವೂ ಒಂದು ದಿನದ ಮಟ್ಟಿಗೆ ಬಂದ್ ಮಾಡುವುದಾಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಆಟೋ ನಗರದವರು ಮುಂಬೈಯಿಂದ ಮನೆಗೆ ಬಂದು ಹೋಗಿದ್ದರು. ಸುಲ್ತಾನಪುರದ ವ್ಯಕ್ತಿ ಪತ್ನಿಯೊಂದಿಗೆ ಮುಂಬೈನಿಂದ ವಾಪಸ್ಸಾಗಿದ್ದರು. ಆದ್ರೆ ಪತ್ನಿ ಆಟೋರಿಕ್ಷಾದಲ್ಲಿ ಗ್ರಾಮಕ್ಕೆ ಹೋದಾಗ ಆಕೆಯನ್ನು ಗ್ರಾಮಸ್ಥರ ಸಹಾಯದಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಕೇಂದ್ರದಲ್ಲಿಯೂ ಸಹ ಪ್ರಾಥಮಿಕ ಸಂಪರ್ಕದ ಬಗ್ಗೆ ಪೂರ್ಣ ಮಾಹಿತಿ ಸಿಗದ ಹಿನ್ನೆಲೆ ನಾಳೆ ರಾಯಚೂರು ನಗರ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು ಅಂತ ರಾಯಚೂರು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 6 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. ನಾಳೆಯಿಂದ ಸಾರಿಗೆ ಬಸ್ ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೆ ನಗರದಲ್ಲಿ ಸಂಪೂರ್ಣ ಲಾಕ್‍ಡೌನ್ ಹೇರುತ್ತಿರುವುದರಿಂದ ಬಸ್ ಸಂಚಾರ ಅನುಮಾನವಾಗಿದೆ. ಉಳಿದಂತೆ ತಾಲೂಕು ಪ್ರದೇಶದಲ್ಲಿ ಬಸ್‍ಗಳ ಓಡಾಟಕ್ಕೆ ಸಮಸ್ಯೆಯಿಲ್ಲ.