– ಪತಿ ವಿಕೃತಿ ಕಂಡು ಪತ್ನಿ, ಮಗಳು ಪರಾರಿ
ಪಾಟ್ನಾ: ಮೂರು ಗಂಡು ಮಕ್ಕಳು ಹಾಗೂ ಒಬ್ಬ ಮಗಳನ್ನು ತಂದೆಯೇ ಕೊಚ್ಚಿ ಕೊಲೆ ಮಾಡಿದ್ದು, ತಾಯಿ ಹಾಗೂ ಮತ್ತೊಬ್ಬ ಮಗಳು ಪಾರಾಗಿದ್ದಾರೆ.
ಬಿಹಾರದ ಶಿವಾನ್ ಜಿಲ್ಲೆಯ ಬೆಲ್ಹಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಾಪಿ ತಂದೆ ತನ್ನ ಮೂವರು ಗಂಡು ಮಕ್ಕಳು ಹಾಗೂ ಓರ್ವ ಮಗಳನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಅದೃಷ್ಟವಶಾತ್ ಪತ್ನಿ ಹಾಗೂ ಮತ್ತೊಬ್ಬ ಮಗಳು ಮನೆ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಇಬ್ಬರಿಗೂ ಗಾಯಗಳಾಗಿವೆ.
ಆರೋಪಿಯನ್ನು ಅಡವೇಶ್ ಚೌಧರಿ(40) ಎಂದು ಗುರುತಿಸಲಾಗಿದ್ದು, ಮಾರುಕಟ್ಟೆಯಿಂದ ಮನೆಗೆ ಆಗಮಿಸುತ್ತಿದ್ದಂತೆ ಆರೋಪಿ ಹರಿತವಾದ ಆಯುಧವನ್ನು ತೆಗೆದುಕೊಂಡಿದ್ದು, ಇದ್ದಕ್ಕಿದ್ದಂತೆ ತನ್ನ ಮಕ್ಕಳು ಹಾಗೂ ಪತ್ನಿ ಮೇಲೆ ದಾಳಿ ನಡೆಸಿದ್ದಾನೆ. ಸಾವನ್ನಪ್ಪಿದ ಮಕ್ಕಳನ್ನು ಅಭಿಷೇಕ್ ಕುಮಾರ್(14), ಮುಖೇಶ್ ಕುಮಾರ್(10), ಭೋಲಾ ಕುಮಾರ್(12) ಹಾಗೂ ಜ್ಯೋತಿ ಕುಮಾರ್(18) ಎಂದು ಗುರುತಿಸಲಾಗಿದೆ.
ಚೌಧರಿ ಪತ್ನಿ ರೀಟಾ ದೇವಿ ಹಾಗೂ ಮಗಳು ಅಂಜಲಿ ಘಟನಾ ಸ್ಥಳದಿಂದ ಪಾರಾಗಿದ್ದಾರೆ. ಆದರೆ ಗಾಯಗಳಾಗಿವೆ. ಇಬ್ಬರನ್ನೂ ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ(ಪಿಎಂಸಿಎಚ್)ಗೆ ದಾಖಲಿಸಲಾಗಿದೆ.
ಮಧ್ಯರಾತ್ರಿ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಆರೋಪಿ ಅಡವೇಶ್ ಚೌಧರಿಯನ್ನು ಕಸ್ಟಡಿಗೆ ಪಡೆದಿದ್ದೇವೆ. ಬಳಿಕ ತನಿಖೆ ನಡೆಸಿದ್ದು, ಆರೋಪಿ ಬುದ್ಧಿಮಾಂದ್ಯನಾಗಿದ್ದಾನೆ. ಆದರೆ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾನೆ. ಹೀಗಾಗಿ ಈ ರೀತಿ ವರ್ತಿಸಿದ್ದಾನೆ ಎಂದು ಎಎಸ್‍ಐ ಶಶಿ ಭೂಷಣ್ ಕುಮಾರ್ ತಿಳಿಸಿದ್ದಾರೆ.
ನಾನು ಮನೆಗೆ ಬರುವಾಗ ನನ್ನ ದೇಹದಲ್ಲಿ ಏನೋ ಪ್ರವೇಶಿಸಿದಂತಾಯಿತು. ಹೀಗಾಗಿ ನನ್ನ ಕುಟುಂಬದವರನ್ನು ಕೊಲ್ಲುವಂತಾಯಿತು. ನನಗೆ ಪ್ರಜ್ಞೆ ಬಂದ ಬಳಿಕ ಇದು ನನಗೆ ತಿಳಿದಿಲ್ಲ ಎಂದು ಚೌಧರಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಅಲ್ಲದೆ ತಪ್ಪೊಪ್ಪಿಕೊಳ್ಳಲು ಆರೋಪಿ ಜಿಲ್ಲಾಧಿಕಾರಿ ಹಾಗೂ ಎಸ್‍ಪಿಗೆ ಸಹ ಕರೆ ಮಾಡಿದ್ದಾಗಿ ಹೇಳಿದ್ದಾನೆ. ಆದರೆ ಅವರು ಕರೆ ಸ್ವೀಕರಿಸಿಲ್ಲ ಎಂದು ವರದಿಯಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಅಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಮನೆಯನ್ನು ಸೀಲ್ ಮಾಡಿದ್ದಾರೆ.