ಮಂಗಳೂರು: ಡಿಸೆಂಬರ್ 17ರಿಂದ ಡಿ.20ವರೆಗೆ ನಾಲ್ಕು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ಪ್ರವೇಶವನ್ನು ನಿಷೇಧಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೊರೊನಾ ಎರಡನೇ ಅಲೆ ಸಂಭವವಿರುವುದರಿಂದ ಪ್ರವೇಶ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.
ಮುಂಗಡ ನೋಂದಾಯಿಸಿರುವ ಭಕ್ತಾದಿಗಳಿಗೆ ಕೇವಲ ರಥೋತ್ಸವ ಸೇವೆಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ದೇವಸ್ಥಾನದ ಆಡಳಿತಾಧಿಕಾರಿ ಯತೀಶ್ ಉಳ್ಳಾಲ್ ಮನವಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. 50 ಸಾವಿರಕ್ಕೂ ಅಧಿಕ ಭಕ್ತಾದಿಗಳು ಬರುವ ಸಾಧ್ಯತೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಇಲ್ಲಿನ ಜಾತ್ರಾ ಮಹೋತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರಸ್ತುತ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಗಿರುವುದರಿಂದ ಅಗತ್ಯ ಸಂಖ್ಯೆಯ ಪೊಲೀಸರ ನಿಯೋಜನೆ ಕಷ್ಟಸಾಧ್ಯವಾಗಿದೆ. ಆದ್ದರಿಂದ ಕೋವಿಡ್ ನಿಯಮ ಪಾಲನೆ ಮಾಡುವ ನೆಲೆಯಲ್ಲಿ ಚಂಪಾಷಷ್ಠಿ ಮಹೋತ್ಸವದ ಸಂದರ್ಭ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಗಣ್ಯರನ್ನು ಅಂತರ್ ಜಿಲ್ಲೆ ಹಾಗೂ ಅಂತರ್ ರಾಜ್ಯದ ಸಾರ್ವಜನಿಕರು ಹಾಗೂ ಭಕ್ತಾದಿಗಳ ಆಗಮನವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.