– ಪೊಲೀಸರಿಗೆ ಸವಾಲಾಗಿದೆ ಕೇಸ್
ಉಡುಪಿ: ಇಲ್ಲಿನ ನಾರಾಯಣಗುರು ಮಂದಿರಕ್ಕೆ ಕಳ್ಳರು ನುಗ್ಗಿ ಹುಂಡಿ ಹೊತ್ತೊಯ್ದಿದ್ದಾರೆ. ಸಿಸಿಟಿವಿ ಇಲ್ಲದ ಕಾರಣ ಕಳ್ಳರ ಪತ್ತೆ ಪೊಲೀಸರಿಗೆ ಸವಾಲಾಗಿದೆ.
ಕಾಪು ತಾಲೂಕು ಮೂಳೂರು ಬಿಲ್ಲವ ಸಂಘದ ನಾರಾಯಣಗುರು ಮಂದಿರದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಕಾಣಿಕೆ ಡಬ್ಬಿಯನ್ನು ಒಡೆದು ನಗದು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಅರ್ಚಕರು ಬೆಳಗ್ಗೆ ಪೂಜೆಗಾಗಿ ಆಗಮಿಸಿದ ವೇಳೆ ವಿಚಾರ ಬಯಲಾಗಿದೆ.
ನಾರಾಯಣ ಗುರು ಸಂಘದ ಪ್ರಮುಖರು ಕಾಪು ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿದ್ದಾರೆ. ಬೆರಳಚ್ಚು ತಜ್ಞರು ಕಳ್ಳರ ಜಾಡು ಹಿಡಿಯಲು ಮಾಹಿತಿ ಕಲೆ ಹಾಕುತ್ತಿದ್ದಾರೆ. ಶ್ವಾನದಳ ಸ್ಥಳಕ್ಕೆ ಬರುವ ಸಾಧ್ಯತೆ ಇದ್ದು, ಸುತ್ತಮುತ್ತಲಿನ ನಿವಾಸಿಗಳ ಬಳಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಸ್ಥಳೀಯ ಬಿಲ್ಲವ ಸಮುದಾಯದ ಮುಂದಾಳುಗಳಾದ ಪ್ರಮೋದ್ ಮತ್ತು ಪುರುಷೋತ್ತಮ್ ಮಾತನಾಡಿ, ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಮಾಡಬೇಕು. ಹುಂಡಿಯಲ್ಲಿ ಇದ್ದ ಹಣವು ಭಕ್ತರು ಗುರುಗಳಿಗೆ ಸಮರ್ಪಿಸಿದ್ದು, ಹಣದಲ್ಲಿ, ಹರಕೆ ರೂಪದಲ್ಲಿ ಹಾಕಿದ್ದ ವಸ್ತುಗಳಲ್ಲಿ ಭಕ್ತರ ಭಾವನೆ ಇದೆ. ಮಂದಿರಕ್ಕೆ ಸಿಸಿಟಿವಿ ಅಳವಡಿಸುವ ಅವಶ್ಯಕತೆ ಇದೆ ಎಂದರು.