ಚಿಕ್ಕಮಗಳೂರು: ದಾರಿತಪ್ಪಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯೊಂದು ನಾಯಿಗಳ ದಾಳಿಗೆ ತುತ್ತಾಗಿ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಉಗ್ಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋಮವಾರ ಸಂಜೆ ನಾಡಿಗೆ ಬಂದಿದ್ದ ಜಿಂಕೆ ಮೇಲೆ ಸುಮಾರು ಐದಾರು ನಾಯಿಗಳು ದಾಳಿ ಮಾಡಿದ್ದವು. ಈ ವೇಳೆ ಜಿಂಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಜಿಂಕೆ ಸುಮಾರು ಒಂದು ಕ್ವಿಂಟಲ್‍ನಷ್ಟು ತೂಕವಿದ್ದು ದೈತ್ಯವಾಗಿತ್ತು. ಜಿಂಕೆಯ ಕೋಡುಗಳು ದೊಡ್ಡದ್ದಾಗಿದ್ದರಿಂದ ಬೇಲಿಗಳ ಮಧ್ಯೆ ಓಡಲು ಸಾಧ್ಯವಾಗದೆ ನಾಯಿಗಳ ಬಾಯಿಗೆ ಸುಲಭ ತುತ್ತಾಗಿದೆ.
Advertisement
Advertisement
ಜಿಂಕೆ ಅತಿ ಸೂಕ್ಷ್ಮ ಪ್ರಾಣಿ. ಜಿಂಕೆ ಮೇಲೆ ನಾಯಿ ಸೇರಿದಂತೆ ಯಾವುದೇ ಪ್ರಾಣಿಗಳು ದಾಳಿ ಮಾಡದಿದ್ದರೂ ಜನಸಾಮಾನ್ಯರು ಅವುಗಳ ಪಕ್ಕ ನಿಂತರೂ ಅವು ಹೃದಯಾಘಾತದಿಂದ ಸಾಯುತ್ತವೆ. ಹೀಗಾಗಿ ಐದಾರು ನಾಯಿಗಳ ದಾಳಿ ಮಾಡಿದ ಕೂಡಲೇ ಅಷ್ಟೇನು ಗಾಯಗಳಾಗದಿದ್ದರೂ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಪಶು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Advertisement
ಮಲೆನಾಡು ಭಾಗದಲ್ಲಿ ಈ ರೀತಿ ನಾಯಿಗಳ ಬಾಯಿಗೆ ಜಿಂಕೆ ತುತ್ತಾಗ್ತಿರೋದು ವಾರದಲ್ಲಿ ಇದು ಮೂರನೇ ಪ್ರಕರಣ. ಮಲೆನಾಡಲ್ಲಿ ಜಿಂಕೆಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಜಿಂಕೆಗಳು ದಾರಿ ತಪ್ಪಿಬಂದು ಈ ರೀತಿ ನಾಯಿ ಬಾಯಿಗೆ ತುತ್ತಾಗಿವೆ.
Advertisement
ಜಿಲ್ಲೆಯ ತರೀಕೆರೆ ತಾಲೂಕಿಲ್ಲೂ ದಾರಿ ತಪ್ಪಿ ನಾಡಿಗೆ ಬಂದಿದ್ದ ಜಿಂಕೆ ನಾಯಿಗಳ ಬಾಯಿಗೆ ತುತ್ತಾಗಿತ್ತು. ಆದರೆ, ಕೂಡಲೇ ಇದನ್ನು ಗಮನಿಸಿದ ಸ್ಥಳಿಯರು ನಾಯಿಗಳಿಂದ ಜಿಂಕೆಯನ್ನ ರಕ್ಷಿಸಿ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿ ಮತ್ತೆ ಕಾಡಿಗೆ ಬಿಟ್ಟಿದ್ದಾರೆ.