– ಮುಖದ ಮೇಲಿನ ಗಾಯದಿಂದ ಸಿಕ್ಕಬಿದ್ದ ಆರೋಪಿ
ಜೈಪುರ: ಸಾಕು ನಾಯಿಗೆ ವಾಕ್ ಮಾಡಿಸುವ ವಿಚಾರಕ್ಕೆ ಜಗಳ ತೆಗೆದಿದ್ದ ಶಿಕ್ಷಕಿಯನ್ನ ಯುವಕನೋರ್ವ ಕೊಲೆ ಮಾಡಿರುವ ಘಟನೆ ಜೈಪುರ ಮಾನಸರೋವರದ ಮಾರ್ಕೆಟ್ ನಲ್ಲಿ ನಡೆದಿತ್ತು. ಪೊಲೀಸರು ಎಂಟು ಗಂಟೆಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.
ವಿಜ್ಞಾದೇವಿ ಶರ್ಮಾ ಕೊಲೆಯಾದ ಶಿಕ್ಷಕಿ. ಸೋಮವಾರ ಬೆಳಗ್ಗೆ ಮನೆಯಲ್ಲಿ ವಿಜ್ಞಾದೇವಿ ಶವ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ಷಣಾರ್ಧದಲ್ಲಿಯೇ ಇದೊಂದು ಕೊಲೆ ಅನ್ನೋದು ಮನವರಿಕೆಯಾಗಿತ್ತು. ಮನೆಯ ಮೇನ್ ಗೇಟ್ ಹಾಕಲಾಗಿತ್ತು, ಆದ್ರೆ ಮೇಲ್ಛಾವಣೆಯ ಬಾಗಿಲು ತೆಗೆದಿದ್ದರಿಂದ ಪೊಲೀಸರ ಅನುಮಾನ ಮತ್ತಷ್ಟು ಬಲವಾಗಿತ್ತು. ಶಿಕ್ಷಕಿಯ ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿರಲಿಲ್ಲ. ಆದ್ರೆ ಕೊಲೆಗೆ ನಿಖರ ಕಾರಣ ತಿಳಿದಿರಲಿಲ್ಲ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಹೇಳಿಕೆ ಪಡೆಯುತ್ತಿದ್ದ ಪೊಲೀಸ್ ಪೇದೆಗೆ ಯುವಕ ಕೃಷ್ಣ ಕುಮಾರ್ ಮೇಲೆ ಅನುಮಾನ ಬಂದಿದೆ. ಯುವಕನ ಮುಖದ ಮೇಲೆ ತರಚಿದ ರೀತಿಯ ಗಾಯಗಳು ಕಂಡು ಬಂದಿತ್ತು. ಗಾಯದ ಬಗ್ಗೆ ಪ್ರಶ್ನಿಸಿದಾಗ ಸಾಕು ನಾಯಿಗೆ ತರಬೇತಿ ನೀಡುವಾಗ ಪರಚಿದೆ ಅಂತ ಹೇಳಿದ್ದನು. ಇದೇ ಸಂಬಂಧ ಕೃಷ್ಣ ಕುಮಾರ್ ಕುಟುಂಬಸ್ಥರು ಭಿನ್ನ ಹೇಳಿಕೆಗಳನ್ನ ನೀಡಿದ್ದರು. ಅನುಮಾನದ ಮೇಲೆ ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಕೃಷ್ಣ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ.
ಮೇನ್ ಗೇಟ್ ಹಾಕಿದ್ರೂ ಒಳ ನುಗ್ಗಿದು ಹೇಗೆ?: ಸೋಮವಾರ ಬೆಳಗ್ಗೆ ವಿಜ್ಞಾದೇವಿ ಹಸುಗಳಿಗೆ ಮೇವು ಹಾಕಲು ಹೊರಗೆ ಬಂದಾಗ ಮನೆ ಒಳಗೆ ನುಗ್ಗಿ ಮೇಲ್ಛಾವಣೆ ತಲುಪಿದ್ದಾನೆ. ನಂತರ ವಿಜ್ಞಾದೇವಿ ಒಳಗೆ ಬಂದು ಬಾಗಿಲು ಹಾಕಿಕೊಳ್ಳುತ್ತಿದ್ದಂತೆ ಹಿಂದಿನಿಂದ ಬಂದು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಈ ವೇಳೆ ಕೃಷ್ಣಕುಮಾರ್ ಮೇಲೆ ವಿಜ್ಞಾದೇವಿ ಉಗುರುಗಳಿಂದ ಪರಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಕೊಲೆಯ ನಂತರ ಅದೇ ಬಾಗಿಲಿನಿಂದ ಹೊರ ಹೋಗುವಲ್ಲಿ ಯಶಸ್ವಿಯಾಗಿದ್ದನು.
ಆರೋಪಿ ಕೃಷ್ಣಕುಮಾರ್ ನಾಯಿಯನ್ನ ಆವರಣದಲ್ಲಿ ವಾಕ್ ಮಾಡಿಸುವಾಗ ವಿಜ್ಞಾದೇವಿ ಜಗಳ ಆಡುತ್ತಿದ್ದರು. ಹಾಗಾಗಿ ಕೊಲೆ ಮಾಡಿದೆ ಎಂದು ಕೃಷ್ಣ ಕುಮಾರ್ ಹೇಳಿದ್ದಾನೆ.