– ಉಡುಪಿಯ ಅಜ್ಜರಕಾಡು ಸಮೀಪ ಹೈಡ್ರಾಮಾ
ಉಡುಪಿ: ಸಾಕು ನಾಯಿಗಾಗಿ ಉಡುಪಿಯಲ್ಲಿ ಯುವಕ- ಯುವತಿ ಕಿತ್ತಾಡಿಕೊಂಡ ಘಟನೆ ನಡೆದಿದೆ. ಯುವತಿಯ ಕಳವಾದ ನಾಯಿ ಪೆಟ್ ಚಾಯ್ಸ್ ನಲ್ಲಿ ಪತ್ತೆಯಾಗಿದ್ದು ನಾಯಿ ಜೊತೆಗಿದ್ದ ಯುವಕನ ಜೊತೆ ಆಕೆ ಜಗಳ ಶುರು ಮಾಡಿದ್ದಾಳೆ.
ಉಡುಪಿ ಅಜ್ಜರಕಾಡಿನಲ್ಲಿರುವ ಪೆಟ್ ಚಾಯ್ಸ್ ಮಳಿಗೆ ಬಳಿ ಹೈಡ್ರಾಮಾ ನಡೆದಿದ್ದು, ಸಾರ್ವಜನಿಕರು ಸಾಕ್ಷಿಯಾದರು. ಯುವಕ ಕಪ್ಪು ನಾಯಿ ಜೊತೆ ಬಂದು ಖರೀದಿಯಲ್ಲಿದ್ದ. ನಾಯಿಗೆ ಬೇಕಾದ ಆಹಾರ ಖರೀದಿ ನಡೆಯುತ್ತಿದ್ದಾಗ ಯುವತಿ ಬಂದಿದ್ದಾಳೆ. ಇದು ನಾನು ಸಾಕಿದ್ದ ನಾಯಿ ಎಂದು ಜಗಳಕ್ಕಿಳಿದಿದ್ದಾಳೆ.
ಇದು ನಾನು ಖರೀದಿ ಮಾಡಿದ ನಾಯಿ. ನನ್ನ ನಾಯಿ ಎಂದು ಯುವಕ ವಾದ ಮಾಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲೇ ನಾಯಿಗಾಗಿ ಕಿತ್ತಾಟ ನಡೆದಿದ್ದು, ಯಾರ ಬಳಿ ಹೋಗುವುದೆಂದು ಕಪ್ಪು ನಾಯಿ ಗೊಂದಲದಲ್ಲಿತ್ತು. ಕೊನೆಗೆ ಕರೆದಾಗ ಸಣ್ಣ ವಯಸ್ಸಿನಲ್ಲೇ ಸಾಕಿ ಸಲಹಿದ ಯುವತಿ ಬಳಿಯೇ ನಾಯಿ ಓಡಿದೆ.
ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದರು. ಯುವಕನನ್ನ ಪೊಲೀಸರು ವಶಕ್ಕೆ ಪಡೆದರು. ನಾಯಿಯ ಮಾಲೀಕರು ಯಾರೆಂದು ವಿಚಾರಣೆ ನಡೆಸುವ ಸಲುವಾಗಿ ಠಾಣೆಗೆ ಕರೆದೊಯ್ದರು. ನಾಯಿಯನ್ನು ಮೂಲ ಮಾಲೀಕರಿಂದ ಕದ್ದು ಯುವಕನಿಗೆ ಮಾರಿದ ಕಳ್ಳನನ್ನ ಹಿಡಿಯುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.