– ಇಬ್ಬರು, ಮೂವರಿಂದ ನಾಯಕತ್ವ ಬದಲಾವಣೆ ಮಾತು
– ಹೊಸಬರಿಗೆ ಪಕ್ಷದ ರೀತಿ, ನೀತಿ ಗೊತ್ತಿಲ್ಲ
ಬೆಂಗಳೂರು: ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ಕೇವಲ ಇಬ್ಬರು, ಮೂವರು ಈ ಬಗ್ಗೆ ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರ ಮನವೊಲಿಕೆ ಕೆಲಸ ಸಹ ನಡೆಯುತ್ತಿದೆ. ಒಂದು ವೇಳೆ ಸುಮ್ಮನಾಗದಿದ್ದರೆ ಸೂಕ್ತ ಕ್ರಮವನ್ನು ಸಹ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದರು.
ಬಿಜೆಪಿ ಕಚೇರಿಯಲ್ಲಿ 15 ಶಾಸಕರು ಸೇರಿ ಹಲವು ನಾಯಕರೊಂದಿಗೆ ಚರ್ಚಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಕುರಿತು ಯಾವ ಶಾಸಕರ ಬಳಿಯೂ ನಾನು ಚರ್ಚಿಸಿಲ್ಲ. ಈ ಕುರಿತು ಚರ್ಚಿಸುವುದಾದರೆ ಎಲ್ಲ ನಾಯಕರೊಂದಿಗೆ ಸಭೆ ನಡೆಸುತ್ತಿದ್ದೆ. ಪಕ್ಷದಲ್ಲಿ ಒಬ್ಬಬ್ಬಿರು ಇಂತಹ ನಾಯಕರು ಇದ್ದಾರೆ, ಇದರಿಂದಾಗಿ ಪಕ್ಷಕ್ಕೆ ಮುಜುಗರವಾಗುತ್ತಿರುವುದು ಸತ್ಯ. ಪಕ್ಷದ ಸಂಘಟನೆ, ನಾಯಕರ ಹೇಳಿಕೆಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪರಿಶೀಲಿಸುತ್ತಿದ್ದಾರೆ. ಆದರೆ ಯಾರೂ ಸಹ ಮಾಧ್ಯಮದ ಮುಂದೆ ಮಾತನಾಡಿ, ಪಕ್ಷಕ್ಕೆ ಮುಜುಗರವನ್ನುಂಟು ಮಾಡಬೇಡಿ ಎಂದು ಎಚ್ಚರಿಸಿದರು.
Advertisement
Advertisement
ಕೇವಲ ಇಬ್ಬರು, ಮೂವರು ಹೇಳಿಕೆ ನೀಡುವ ಮೂಲಕ ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ನೋವುಂಟು ಮಾಡುತ್ತಿದ್ದಾರೆ. ಈ ಕುರಿತು ನಾವು ಖಂಡಿತವಾಗಿಯೂ ಲಕ್ಷ್ಯ ವಹಿಸುತ್ತೇವೆ. ಇದು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿದಿದೆ, ನಮಗೂ ಈ ಕುರಿತು ಗೊತ್ತಿದೆ. ಅವರ ಮನವೊಲಿಸುವ ಪ್ರಕ್ರಿಯೆ ಸಹ ನಡೆಯುತ್ತಿದೆ. ಮಾತು ಕೇಳದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
Advertisement
ಕೆಲ ಹೊಸಬರು ನಾಯಕತ್ವದ ಬಗ್ಗೆ ಮಾತನಾಡುತ್ತಿರುವುದನ್ನು ಪಕ್ಷದ ನಾಯಕರು ತಿಳಿಸಿದರು. ಅವರಿಗೆ ಪಕ್ಷದ ರೀತಿ, ನೀತಿ, ಸಿದ್ಧಾಂತ ತಿಳಿದಿಲ್ಲ, ಹೀಗಾಗಿ ಮಾತನಾಡುತ್ತಿದ್ದಾರೆ. ನಮ್ಮ ಲಕ್ಷಾಂತರ ಕಾರ್ಯಕರ್ತರು ತಮ್ಮ ಜೀವನನ್ನು ಪಣಕ್ಕಿಟ್ಟು ಪಕ್ಷವನ್ನು ಸಂಘಟಿಸಿ, ಉನ್ನತ ಸ್ಥಾನದಲ್ಲಿರಿಸಿದ್ದಾರೆ. ಆದರೆ ಕೆಲ ಹೊಸಬರಿಗೆ ಪಕ್ಷದ ಸಂಸ್ಕøತಿ, ರೀತಿ, ನೀತಿ ಗೊತ್ತಿಲ್ಲ. ಈ ರೀತಿಯ ಹೇಳಿಕೆಯನ್ನು ನೀಡುವ ಮೂಲಕ ಪಕ್ಷಕ್ಕೆ ನಷ್ಟವನ್ನುಂಟುಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಎಚ್ಚರಿಕೆ ನೀಡಿದರು.
Advertisement
ನಾವು ಯಾರನ್ನೂ ಕರೆದಿರಲಿಲ್ಲ, ಬಿಡುವು ಇದ್ದಿದ್ದಕ್ಕಾಗಿ ಕೆಲ ನಾಯಕರು ಹಾಗೂ ಶಾಸಕರು ಅವರೇ ಬಂದು ಭೇಟಿಯಾಗಿದ್ದಾರೆ. ಈ ವೇಳೆ ಕೊರೊನಾ ಸಂಕಷ್ಟದ ಸಮಯದಲ್ಲಿ ಯಾವ ರೀತಿ ಕೆಲಸ ಮಾಡುತ್ತಿದ್ದೀರಿ, ಕ್ಷೇತ್ರದಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಎಂದು ಪ್ರಶ್ನಿಸಲಾಯಿತು. ತುಂಬಾ ಚೆನ್ನಾಗಿ ಕೆಲಸ ಮಾಡಿರುವುದಾಗಿ ಶಾಸಕರು ಉತ್ತರಿಸಿದರು. ಅಂಬುಲೆನ್ಸ್, ಕೋವಿಡ್ ಆಸ್ಪತ್ರೆ, ರೇಷನ್ ಕಿಟ್ ನೀಡುವುದು ಸೇರಿದಂತೆ ಇತರೆ ಸೇವೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದು, ಹಗಲು ರಾತ್ರಿ ಎನ್ನದೆ ಶಾಸಕರು ದುಡಿದಿದ್ದಾರೆ.
ಇದೀಗ ಪಕ್ಷದಲ್ಲಿನ ಕೆಲಸ, ಸಂಘಟನೆ ಸೇರಿದಂತೆ ವಿವಿಧ ಕೆಲಸಗಳ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ. ಪಕ್ಷ ಹೇಳಿದ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಅಂತರಾಷ್ಟ್ರೀಯ ಯೋಗ ದಿನ, ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನ, ಸಸಿ ನೆಡುವುದು ಹಾಗೂ ಲಸಿಕೆ ಕೇಂದ್ರಗಳಲ್ಲಿ ಸಹಾಯ ಮಾಡುವುದು ಹಾಗೂ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಯೋಜನೆಗಳ ಕುರಿತು ಯಾವ ರೀತಿ ಪ್ರಚಾರ ಮಾಡಿದ್ದೀರಿ ಎಂದು ವಿವರಣೆ ಕೇಳಲಾಗಿದೆ. ಸರ್ಕಾರದ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಕುರಿತು ಜಾಗೃತಿ, ಪ್ರಚಾರ ಮಾಡಬೇಕಿದೆ ಎಂದರು.
ಎಲ್ಲರೂ ಒಟ್ಟಾಗಿ ಸೇರಿ ಪಕ್ಷವನ್ನು ಬಲವರ್ಧನೆ ಮಾಡಬೇಕು. ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮಮಟ್ಟಕ್ಕೂ ಕೊಂಡೊಯ್ಯಬೇಕು. ಸಚಿವರು ಕಾರ್ಯಕರ್ತರಿಗೆ ಸಮಯ ನೀಡಲು ತಿಳಿಸಲಾಗಿದೆ. ಅಲ್ಲದೆ ಪಕ್ಷದ ಕಾರ್ಯಕರ್ತರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ನನಗೆ ತುಂಬಾ ಸಂತೋಷವಾಗಿದೆ. ಶಾಸಕರು, ಕಾರ್ಯಕರ್ತರು ಅದ್ಭುತವಾಗಿ ಕೆಲಸ ಮಾಡಿದ್ದಾರೆ.