– ದೆಹಲಿ ಭೇಟಿ ಒಪ್ಪಿಕೊಂಡ ಸಿಪಿವೈ
ಬೆಂಗಳೂರು: ರಾಜ್ಯದಲ್ಲಿ ಸದ್ಯ ಸಿಎಂ ಬದಲಾವಣೆಯದ್ದೇ ಚರ್ಚೆಯಾಗಿದೆ. ಈ ಮಧ್ಯೆ ಕೆಲವರು ಲಾಬಿ ನಡೆಸಲು ದೆಹಲಿಗೆ ತೆರಳಿದ್ದಾರೆ ಎಂಬ ಸುದ್ದಿಯೂ ಜೋರಾಗಿದೆ. ಈ ಬೆನ್ನಲ್ಲೇ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಅವರು ದೆಹಲಿ ಭೇಟಿಯನ್ನು ಒಪ್ಪಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ನನ್ನ ವೈಯಕ್ತಿಕ ವಿಚಾರಕ್ಕೆ ಆಗಾಗ ಹೋಗುತ್ತಿರುತ್ತೇನೆ. ಪಕ್ಷದ ಚೌಕಟ್ಟಿನಲ್ಲಿ ನಾನು ವರಿಷ್ಠರ ಜೊತೆ ಚರ್ಚಿಸಿದ್ದೇನೆ. ನನಗೆ ಅಸಮಾಧಾನವಿದೆ, ಕೆಲವೊಂದು ನೋವುಗಳಿವೆ. ಹೀಗಾಗಿ ದೆಹಲಿಗೆ ಹೋಗಿದ್ದೇನೆ. ಆದರೆ ದೆಹಲಿಗೆ ಹೋಗಿದ್ರಲ್ಲಿ ತಪ್ಪೇನಿದೆ..? ಮುಂದೆ ಎಲ್ಲವೂ ಗೊತ್ತಾಗಲಿದೆ ಎಂದರು.
ವರಿಷ್ಠರ ಮುಂದೆ ಏನ್ ಹೇಳಬೇಕೋ ಅದನ್ನು ಹೇಳಿದ್ದೀನಿ. ಮುಂದೆ ಎಲ್ಲವೂ ಬಹಿರಂಗವಾಗಲಿದೆ. ನನಗೆ ಕೆಲವೊಂದು ವಿಚಾರಗಳಲ್ಲಿ ಅಸಮಾಧಾನವಿದೆ. ಈ ವಿಚಾರ ತಿಳಿಸಲು ದೆಹಲಿಗೆ ಹೋಗಿದ್ದೇನೆ. ನಾನು ಹಸ್ತಕ್ಷೇಪ ಸಹಿಸಲ್ಲ. ಜವಾಬ್ದಾರಿ ಕೊಡದಿದ್ದರೂ ನನಗೆ ಬೇಸರವಿಲ್ಲ. ನನ್ನ ವಿರುದ್ಧ ಮಾತನಾಡುವವರಿಗೆ ಉತ್ತರಿಸುತ್ತೇನೆ ಎಂದು ಗರಂ ಆಗಿದ್ದಾರೆ.