ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕಿಚ್ಚು ಆರುವ ಲಕ್ಷಣ ಕಾಣಿಸುತ್ತಿಲ್ಲ. ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಬೀಡುಬಿಟ್ಟಿರುವ ಬಿಎಸ್‍ವೈ ವಿರೋಧಿ ಬಣದ ಶಾಸಕ ಅರವಿಂದ್ ಬೆಲ್ಲದ್ ಕೊನೆಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‍ರನ್ನು ಭೇಟಿ ಮಾಡಿ ಅರ್ಧಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಆದರೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದ್ದಾರೆ.
ಇದೇ ವೇಳೆ, ಅಮಿತ್ ಶಾ, ಜೆಪಿ ನಡ್ಡಾ ಭೇಟಿಗೂ ಬೆಲ್ಲದ್ ಪ್ರಯತ್ನ ನಡೆಸಿದ್ದಾರೆ. ಈ ಬೆನ್ನಲ್ಲೇ ಬುಧವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಸಚಿವರ ಸಭೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಬೇಕಾ? ಬೇಡ್ವಾ ಎಂದು ಸಂಧಿಗ್ಧತೆಯಲ್ಲಿ ಅರುಣ್ ಸಿಂಗ್ ಸಿಲುಕಿದ್ದಾರೆ ಎನ್ನಲಾಗಿದೆ. ಅರುಣ್ ಸಿಂಗ್ ಜೊತೆಗೆ ವೀಕ್ಷಕರೊಬ್ಬರನ್ನು ಕಳಿಸಿ ಎಂದು ಬಿಎಸ್‍ವೈ ವಿರೋಧಿ ಬಣ ಹೈಕಮಾಂಡ್‍ಗೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ಬಣದ ಚಿಂತೆಗೆ ಕಾರಣವಾಗಿದೆ.
ಈ ಮಧ್ಯೆ ಅರವಿಂದ್ ಬೆಲ್ಲದ್ ವಿರುದ್ಧ ಎಂಎಲ್‍ಸಿ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ. ಅರವಿಂದ್ ಬೆಲ್ಲದ್ ಎಂಬ ಮನುಷ್ಯ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ತಾವೇ ಗೆದ್ದು ಬರಲು ತಿಣುಕಾಡುವ ಮನುಷ್ಯ ಆತ. ಅವರು ಸಿಎಂ ಕನಸು ಕಾಣಲಿ ಯಾರು ಬೇಡ ಅಂತಾರೆ ಎಂದು ಆಯನೂರು ಮಂಜುನಾಥ್ ವ್ಯಂಗ್ಯ ಮಾಡಿದ್ದಾರೆ. ಇನ್ನು ವಿಜಯಪರದ ಶಾಸಕ ಯತ್ನಾಳ್ ಶಾಸಕರಿಗೆ ಕರೆ ಮಾಡಿ ನಾನೇ ಮುಂದಿನ ಸಿಎಂ, ಸಹಕಾರ ಕೊಡಿ ಎಂದು ಕೇಳ್ತಿದ್ದಾರೆ ಅಂತಾ ರೇಣುಕಾಚಾರ್ಯ ಆರೋಪಿಸಿದ್ದಾರೆ.
ಅರುಣ್ ಸಿಂಗ್ ಬಳಿ ಬೆಲ್ಲದ್ ಹೇಳಿದ್ದೇನು?
ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಚುನಾವಣೆ ದೃಷ್ಟಿಯಿಂದ ನಾಯಕತ್ವ ಬದಲಾವಣೆ ಮಾಡಿ. ಹೊಸ ನಾಯಕತ್ವದಲ್ಲಿ ಮುಂದಿನ ಚುನಾವಣೆಗೆ ಸಜ್ಜಾಗಲು ಅವಕಾಶ ನೀಡಿ. ಶಾಸಕಾಂಗ ಸಭೆ ಕರೆಯಿರಿ. ಅಭಿಪ್ರಾಯ ಸಂಗ್ರಹಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಬಹಳಷ್ಟು ಶಾಸಕರಿಗೆ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ಇದೆ. ವಿಜಯೇಂದ್ರ ಹಸ್ತಕ್ಷೇಪದಿಂದ ಪಕ್ಷದ ಶಾಸಕರ ಕೆಲಸ ಆಗುತ್ತಿಲ್ಲ. ಕೊರೊನಾ ನೆಪದಲ್ಲಿ ಎಲ್ಲವನ್ನೂ ಮುಂದೂಡೋದು ಸರಿಯಲ್ಲ, ಹಾಗಾಗಿ ಈ ಸಂದರ್ಭದಲ್ಲಿಯೇ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಎಂ ಬೆಂಬಲಕ್ಕೆ ನಿಂತ ಮಠಾಧೀಶರು:
ಈ ನಡುವೆ ಸಿಎಂ ನಿವಾಸಕ್ಕೆ ಧಾವಿಸಿದ ಹಲವು ಆಪ್ತ ಶಾಸಕರು, ಯಡಿಯೂರಪ್ಪಗೆ ಜೈ ಎಂದಿದ್ದಾರೆ. ನಾವು ಯಡಿಯೂರಪ್ಪ ಪರ ಎಂದು ರಾಣೆಬೆನ್ನೂರು ಶಾಸಕ ಅರುಣ್ ಪೂಜಾರ್ ಪ್ರಕಟಿಸಿದ್ದಾರೆ. ಸಿಎಂ ಬದಲಾವಣೆ ರಾಜಕೀಯ ಜೋರಾದ ಬೆನ್ನಲ್ಲೇ ಬಿಎಸ್‍ವೈ ಬೆಂಬಲಕ್ಕೆ ವೀರಶೈವ ಲಿಂಗಾಯತ ಸ್ವಾಮೀಜಿಗಳು ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ತುಮಕೂರಲ್ಲಿ ಸುದ್ದಿಗೋಷ್ಠಿ ನಡೆಸಿದ 10ಕ್ಕೂ ಹೆಚ್ಚು ಮಠಾಧೀಶರು, ವಯಸ್ಸಿನ ಕಾರಣ ಹೇಳಿ ಯಡಿಯೂರಪ್ಪ ವಿರುದ್ಧ ಷಡ್ಯಂತ್ರ್ಯ ನಡೀತಿದೆ. ಕರುಣಾನಿಧಿ ಗಾಲಿ ಕುರ್ಚಿಲಿ ಕುಳಿತು ಆಡಳಿತ ನಡೆಸಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್‍ವೈ ಅವ್ರೇ ಕಾರಣ.. ಅವ್ರನ್ನು ಮೂಲೆಗುಂಪು ಮಾಡಲು ನೋಡಿದ್ರೆ ನಾವು ಸುಮ್ಮನಿರಲ್ಲ. ಅವರಿಗೆ ಆಡಳಿತ ಪೂರೈಸಲು ಸಹಕರಿಸಿ ಎಂದು ಸ್ವಾಮೀಜಿಗಳು ಒತ್ತಾಯಿಸಿದ್ದಾರೆ.
ಚಿಕ್ಕೋಡಿಯಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ. 2 ವರ್ಷ ಯಡಿಯೂರಪ್ಪ ಸರ್ಕಾರ ಖಚಿತವಾಗಿ ಮುಂದುವರೆಯುತ್ತೆ ಎಂದಿದ್ದಾರೆ. ನಮ್ಮನ್ನು ಈ ವಿಚಾರದಲ್ಲಿ ಎಳೆದುತರಬೇಡಿ.. ನಾವು ಯಾರ ಬೆಂಬಲಕ್ಕೂ ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.