– ಬಿಎಸ್‍ವೈ ಅಪ್ಪನ ಮನೆಯಿಂದ ರೇಷನ್ ತಂದು ಕೊಡಲ್ಲ
ಮಂಡ್ಯ: ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂದು ಅಸೂಯೆಯಿಂದ ನನ್ನ ಪ್ಲಾನ್ ಮಾಡಿ ಸೋಲಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಾಹಳ್ಳಿ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿಯಾಗಿದ್ದಾಗ ಜನರಿಗೆ ಹಲವು ಯೋಜನೆಗಳನ್ನು ನೀಡಿದ್ದೇನೆ. ನಾನು ಮಾಡಿದ ಕೆಲಸಗಳನ್ನು ಯಾರು ಮರೆಯಲು ಸಾಧ್ಯವಿಲ್ಲ. ಹೀಗಿರುವಾಗ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಅಸೂಯೆಯಿಂದ ಪ್ಲಾನ್ ಮಾಡಿ ನನ್ನ ಸೋಲಿಸಿದ್ದಾರೆ ಎಂದರು.
ನಾನು ಸಿಎಂ ಆಗಿದ್ದಾಗ 7 ಕೆ.ಜಿ ಅಕ್ಕಿಯನ್ನು ಬಡವರಿಗೆ ನೀಡಿದ್ದೆ, ಆದ್ರೆ ಇದೀಗ ಯಡಿಯೂರಪ್ಪ ಅದನ್ನು ಕಡಿಮೆ ಮಾಡಿದ್ದಾನೆ. ನಾನು ಏನು ನಮ್ಮ ಅಪ್ಪನ ಮನೆಯಿಂದ ತಂದು ನಿಮಗೆ ಕೊಟ್ಟಿರಲಿಲ್ಲ. ಅದೇ ರೀತಿ ಯಡಿಯೂರಪ್ಪ ಏನು ಅವನ ಅಪ್ಪನ ಮನೆಯಿಂದ ತಂದುಕೊಡಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ನಾನು ತಂದಿದ್ದ ಕಾರ್ಯಕ್ರಮಗಳನ್ನು ನಿಲ್ಲಿಸುತ್ತಿದ್ದಾನೆ. ಮಾತು ಎತ್ತಿದ್ರೆ ಯಡಿಯೂರಪ್ಪ ನಾನು ರೈತ ಪರ ಎಂದು ಹೇಳುತ್ತಾರೆ. ಹಸಿರು ಶಾಲನ್ನು ಹಾಕಿಕೊಂಡು ಪ್ರಮಾಣವಚನ ಸ್ವೀಕಾರ ಮಾಡಿ, ರೈತರಿಗೆ ಅವಮಾನ ಮಾಡುತ್ತಾನೆ ಎಂದು ಏಕವಚನದಲ್ಲಿ ವಾಗ್ದಾಳಿ ಮಾಡಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಕೇಳಿದ್ರೆ ರೋಮಾಂಚನವಾಗುತ್ತೆ:ಜೆಡಿಎಸ್ ಶಾಸಕ ಅನ್ನದಾನಿ
ನಾನು ಮಾಡಿದ ಎಲ್ಲಾ ಕೆಲಸ ಹೊಳೆಯಲ್ಲಿ ಹುಣಸೆಹಣ್ಣು ತೇದ ಹಾಗೆ ಆಗಿದೆ. ನಾನು ಜಾತಿಯನ್ನು ನಂಬಲ್ಲ, ಜಾತಿಯನ್ನು ನಂಬಿ ರಾಜಕೀಯ ಮಾಡಲ್ಲ. ಜನರಿಗಾಗಿ ನಾನು ಕೆಲಸ ಮಾಡಬೇಕು ಎಂದುಕೊಂಡಿರುವವನು. ಜೆಡಿಎಸ್ ಅವರು ಕುಮಾರಸ್ವಾಮಿಯನ್ನಾ, ಬಿಜೆಪಿ ಯಡಿಯೂರಪ್ಪನನ್ನಾ ಸಿಎಂ ಮಾಡಬೇಕು ಎಂದು ಚುನಾವಣೆ ಮಾಡಿದ್ರು. ಈ ವೇಳೆ ಎರಡು ಸಮಾಜಗಳು ಒಟ್ಟಾಗಿದ್ದರು, ಆದರೆ ಬೇರೆಯವರು ಒಂದಾಗಲಿಲ್ಲ. ಹೀಗಾಗಿ ನಾನು ಸೋತು ಬಿಟ್ಟೆ. ಈಗ ಮತ್ತೆ ಹೋರಾಡುವ ಕಾಲ ಬಂದಿದೆ. ಈಗ ಮತ್ತೆ ಹೋರಾಟ ನಡೆಸುತ್ತೇವೆ. ನಾನು ಯಾರಿಗೂ ಕೂಡ ಜಗ್ಗಲ್ಲ. ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದೆ ಬರುತ್ತದೆ ಅದರ ಬಗ್ಗೆ ಯಾವುದೇ ಮಾತು ಬೇಡ. ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಹೇಳಿದರು. ಇದನ್ನೂ ಓದಿ: ಮದ್ದೂರು ವಡೆ ಸವಿದ ಸಿದ್ದರಾಮಯ್ಯ