-ಜೀವಂತವಾಗಿದ್ದೇನೆ, ಸತ್ತಿಲ್ಲ: ಯುವತಿ ವಿಡಿಯೋ ಸಂದೇಶ
-ಅಂತ್ಯಕ್ರಿಯೆ ಸಲ್ಲಿಸಿದ ಶವ ಯಾರದ್ದು?
ಪಾಟ್ನಾ: ಪೋಷಕರು ಅಂತ್ಯಕ್ರಿಯೆ ನಡೆಸಿದ 10 ದಿನಗಳ ಬಳಿಕ ಯುವತಿ ಪ್ರತ್ಯಕ್ಷವಾಗಿರುವ ವಿಚಿತ್ರ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ರಹೀಂಪುರದಲ್ಲಿ ನಡೆದಿದೆ. ಮಗಳು ಬದುಕಿರುವ ವಿಷಯ ತಿಳಿದು ಪೋಷಕರು ಖುಷಿಯಾಗಿದ್ರೆ, ಇತ್ತ ಪೊಲೀಸರಿಗೆ ಅಂತ್ಯಕ್ರಿಯೆ ನಡೆಸಿದ ಶವ ಯಾರದು ಅನ್ನೋ ಪ್ರಶ್ನೆ ಮೂಡಿದೆ.
ಆಗಸ್ಟ್ 22ರಂದು ರಹೀಂಪುರದ ವ್ಯಕ್ತಿ ತನ್ನ ಮಗಳು ಮೇನಕಾಳನ್ನ ಅಪಹರಿಸಲಾಗಿದೆ ಎಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಸಹ ಎಫ್‍ಐಆರ್ ದಾಖಲಿಸಿಕೊಂಡು ಮೇನಕಾ ಪತ್ತೆಗೆ ಮುಂದಾಗಿದ್ದರು. ಮರುದಿನವೇ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವತಿಯ ಸಹ ಶವ ಪತ್ತೆಯಾಗಿತ್ತು. ಶವ ಗುರುತು ಸಿಗದ ಸ್ಥಿತಿಯಲ್ಲಿತ್ತು.
ಮೇನಕಾ ಶವ ಎಂದು ತಿಳಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಹಾಗೆ ಅತ್ಯಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು. ಪೋಷಕರು ಮಗಳ ಶವವೆಂದು ತಿಳಿದು ಅಂತಿಮ ವಿಧಿ ವಿಧಾನಗಳನ್ನು ಸಲ್ಲಿಸಿದ್ದರು.
ಮದ್ವೆಯಾಗಿ ಬಂದ ಮೇನಕಾ: 10 ದಿನಗಳ ಬಳಿಕ ಮೇನಕಾ ತನ್ನ ಕುಟುಂಬಸ್ಥರಿಗೆ ವಿಡಿಯೋ ಸಂದೇಶ ರವಾನಿಸಿದ್ದಳು. ನಾನು ಸ್ವಇಚ್ಛೆ ಮೇರೆಗೆ ಮನೆ ಬಿಟ್ಟು ಬಂದಿದ್ದು, ಪ್ರೀತಿಸುತ್ತಿದ್ದ ಹುಡುಗನನ್ನ ಮದುವೆಯಾಗಿರುವ ವಿಷಯ ತಿಳಿಸಿದ್ದಾಳೆ. ಕುಟುಂಬಸ್ಥರಿಗೆ ಫೋನ್ ಮಾಡಿರುವ ಮೇನಕಾ, ತನ್ನ ಸಾವಿನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾಳೆ.
ಮಗಳ ಬದುಕಿರುವ ಸುದ್ದಿ ತಿಳಿದ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಪತ್ತೆಯಾಗಿದ್ದ ಶವ ಮೇನಕಾಳದ್ದು ಎಂದು ತಿಳಿದ ಪೊಲೀಸರು ಗೊಂದಲದಲ್ಲಿ ಸಿಲುಕಿದ್ದಾರೆ. ಸದ್ಯ ಪೊಲೀಸರು ಶವ ದೊರೆತಿರುವ ಬಗ್ಗೆ ಹೊಸದಾಗಿ ತನಿಖೆ ಆರಂಭಿಸಿದ್ದಾರೆ.