ಹುಬ್ಬಳ್ಳಿ: ಕಾಂಗ್ರೆಸ್‍ಗೆ ನೂರಾರು ವರ್ಷಗಳ ಇತಿಹಾಸವಿದೆ. ಯಾರು ಪಕ್ಷ ಬಿಟ್ಟರೂ ಕಾಂಗ್ರೆಸ್ ಇರುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲು ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪಕ್ಷದಿಂದ ಹೊರಹೋಗುವವರು ಹೋಗುತ್ತಾರೆ. ಯಾರು ಪಕ್ಷ ಬಿಟ್ಟರೂ ಕಾಂಗ್ರೆಸ್ ಇರುತ್ತೆ. ನಾನು ಬಿಟ್ಟು ಹೋದರೂ ಕಾಂಗ್ರೆಸ್ ಪಕ್ಷ ಇರುತ್ತದೆ ಎಂದರು.
ಮೇಲ್ಮನೆಯಲ್ಲಿ ನಮಗೆ ಸಂಖ್ಯಾಬಲ ಇಲ್ಲವೆಂದು ಗೊತ್ತಿದೆ. ಆದರೆ ಬಿಜೆಪಿಯವರು ಸಭಾಪತಿ ಸದನಕ್ಕೆ ಬರುವ ಮುನ್ನವೇ ಯಾಕೆ ಕಲಾಪ ಆರಂಭಿಸಬೇಕಿತ್ತು. ಬಿಜೆಪಿಯವರು ಮೊದಲು ನೋಟಿಸ್ ನೀಡಿ, ಇಲ್ಲವೇ ಕಾನೂನು ಹೋರಾಟ ಮಾಡಬೇಕಿತ್ತು. ಅದು ಬಿಟ್ಟು ವಿಧಾನ ಪರಿಷತ್ ಅಧಿವೇಶನದಲ್ಲಿ ಗಲಾಟೆ ಮಾಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ರಾಜ್ಯಪಾಲರ ಬಳಿ ಹೋಗಿದ್ದಾರೆ. ಎನಾಗುತ್ತೆ ನೋಡೋಣ. ಆದರೆ ಸಭಾಪತಿ ಪ್ರತಾಪ್ ಶೆಟ್ಟಿಯವರಿಗೆ ಅಧಿಕಾರದ ಆಸೆ ಇಲ್ಲ. ಅವರು ಅಧಿಕಾರಕ್ಕೆ ಅಂಟಿಕೊಳ್ಳುವರಲ್ಲ. ವಿಧಾನಪರಿಷತ್ ನಲ್ಲಿ ಗಲಾಟೆಯಾಗಲು ಬಿಜೆಪಿಯವರು ಕಾರಣ. ಬಿಲ್ ಪಾಸ್ ಮಾಡುವ ನಿಟ್ಟಿನಲ್ಲಿ ತರಾತುರಿಯಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದು ಸರಿಯಲ್ಲ. ಮೇಲ್ಮನೆಯಲ್ಲಿ ನಮಗೆ ಸಂಖ್ಯಾಬಲ ಇಲ್ಲ ಎಂದು ಗೊತ್ತಿದೆ ಎಂದರು.
ಗೋಹತ್ಯೆ ನಿಷೇಧ ಮಸೂದೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಒಂದು ವರ್ಗವನ್ನ ಸೀಮಿತ ಮಾಡಿಕೊಂಡು ಮಸೂದೆ ಜಾರಿ ಮಾಡುತ್ತಿದ್ದಾರೆ. ಅವರು ಏನು ಮಾಡ್ತಾರೆ ಮಾಡಲಿ ನೋಡೋಣ. ಗೋಹತ್ಯೆ ಮಸೂದೆ ಜಾರಿಯಿಂದ ರೈತ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಗೋಹತ್ಯೆ ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸಿದರು.