– ಎಸ್ಐಟಿಗೆ ಮೂರು ಪುಟಗಳ ಹೇಳಿಕೆ
– ಕೇಸಿನಲ್ಲಿ ನಾನೂ ಪಾಲುದಾರನೂ ಅಲ್ಲ
– ಪಾಲನ್ನು ಕೂಡ ಪಡೆದಿಲ್ಲ
ಬೆಂಗಳೂರು: ಜಾರಕಿಹೊಳಿ ಸಿಡಿ ಪ್ರಕರಣ ದಿನದಿನವೂ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಸಿಡಿ ರಿವೈಂಡ್ ಮಾಡಿದಷ್ಟು ಸುಳ್ಳು ತೆರೆದುಕೊಳ್ಳುತ್ತಿದೆ. ದೂರು ಕೊಟ್ಟಾಗ ಅಬ್ಬರಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಈಗ ಥಂಡಾ ಹೊಡೆದಿದ್ದಾರೆ.
ಹೌದು. ಕನಕಪುರದ ದಿನೇಶ್ ಕಲ್ಲಹಳ್ಳಿ ಸಿಡಿ ಕೇಸ್‍ನಲ್ಲಿ ನಾನು ನಿರಪರಾಧಿ ಎಂದು ವಿಶೇಷ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ. ನಾನು ಒತ್ತಾಯಕ್ಕೆ ಒಳಗಾಗಿದ್ದೆ, ಒತ್ತಾಯದಿಂದ ದೂರು ಕೊಟ್ಟಿದ್ದೇನೆ. ದೂರು ಕೊಡಲೇಬೇಕು ಅಂತ ಒತ್ತಾಯ ಮಾಡಲಿಲ್ಲ. ಹುಡುಗಿಗೆ ನ್ಯಾಯ ಕೊಡಿಸಬೇಕು ಅಂತ ಒತ್ತಾಯ ಮಾಡಿದ್ದರು ಎಂದು ಹೇಳಿದ್ದಾರೆ.
Advertisement
Advertisement
3 ದಿನಗಳ ಕಾಲ ನಿರಂತರವಾಗಿ ಕರೆ ಮಾಡಿದ್ದರಿಂದ ನಾನು ದೂರು ಕೊಡಲು ಮುಂದಾದೆ. ನನ್ನ ಮನೆಗೆ ಭೇಟಿ ನೀಡಿ ದೂರು ಸಿಡಿ ಕೊಟ್ಟಿದ್ದರು ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿಗೆ 3 ಪುಟಗಳ ಹೇಳಿಕೆ ನೀಡಿದ್ದಾರೆ.
Advertisement
ಹೇಳಿಕೆಯಲ್ಲಿ ಏನಿದೆ?
ನಾನು ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದವನಾಗಿದ್ದು ಸಾಕಷ್ಟು ವರ್ಷಗಳಿಂದ ಸಾಮಾಜಿಕ ಹೋರಾಟವನ್ನು ಮಾಡುತ್ತಿದ್ದೇನೆ. ನನ್ನದೇ ಆದ ನಾಗರಿಕ ಹೋರಾಟ ಸಮಿತಿಯೂ ಇದೆ. ಅದರಲ್ಲಿ ನಾನು ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ. ಪಕ್ಷಾತೀತವಾಗಿ ನಾನು ಹೋರಾಟ ಮಾಡಿದ್ದು, ಇದುವರೆಗೂ ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ.
Advertisement
ನನ್ನ ಹೋರಾಟಗಳಲ್ಲಿ ಸಾಕಷ್ಟು ಗೆಲುವು ಸಾಧಿಸಿ, ಜೊತೆಗೆ ನ್ಯಾಯವನ್ನು ದೊರಕಿಸಿಕೊಟ್ಟಿದ್ದೇನೆ. ನಾನು ಈ ರೀತಿಯ ಹೋರಾಟ ಮಾಡುವಾಗ ಸಾಕಷ್ಟು ಜನರ ಪರಿಚಯ ಇತ್ತು. ನನ್ನ ಹೋರಾಟಕ್ಕೆ ಸಹಾಯ ಮಾಡಿದ್ದು ಅಲ್ಲದೆ ನನ್ನ ಹೋರಾಟಗಳು ಮಾಧ್ಯಮಗಳಲ್ಲಿ ಬರುತ್ತಿತ್ತು. ಹೀಗೆ ಪರಿಚಯ ಆದವರ ಹೆಸರಲ್ಲಿ ಲಕ್ಷ್ಮಿಪತಿಯೂ ಒಬ್ಬರು.
ನಾನು ಅವರ ಜೊತೆ ಸಾಕಷ್ಟು ವರ್ಷಗಳಿಂದ ಒಡನಾಟ ಇಟ್ಟುಕೊಂಡಿದ್ದೆ. ಆದರೆ ಅದು ಕೇವಲ ಸುದ್ದಿಯ ವಿಚಾರದಲ್ಲಿ ಆಗಿತ್ತು. ಹೀಗೆ ಪರಿಚಯ ಇದ್ದ ಲಕ್ಷ್ಮಿಪತಿಯವರು ಎಸಿಬಿ ಒಂದರ ಸುದ್ದಿಯ ವಿಚಾರಕ್ಕೆ ಮಾತನಾಡಿದ್ದರು. ಬಳಿಕ ನಾನು ನಿಮಗೆ ಒಂದು ಹೋರಾಟದ ತಿರುಳನ್ನು ಕೊಡುತ್ತೇನೆ ಅದನ್ನ ಇಟ್ಟುಕೊಂಡು ಹೋರಾಟ ಮಾಡಬೇಕು. ಹೋರಾಟ ಮಾಡಿ ನ್ಯಾಯ ಒದಗಿಸಬೇಕು ಅಂತ ಕೇಳಿಕೊಂಡರು. ಅವಾಗ ನಾನು ಈ ವಿಚಾರವಾಗಿ ತಿಳಿದುಕೊಂಡಿರಲಿಲ್ಲ. ಬಳಿಕ ವಿಚಾರ ಏನು ಎಂಬುದನ್ನು ತಿಳಿದುಕೊಳ್ಳವ ಪ್ರಯತ್ನ ಮಾಡಿದೆ.
ಆ ಸಂದರ್ಭದಲ್ಲಿ ರಾಸಲೀಲೆಗೆ ಸಂಬಂಧಪಟ್ಟ ವಿಚಾರ ಎನ್ನುವುದು ಗೊತ್ತಾಯ್ತು. ಆ ಬಳಿಕ ನಾನು ಈ ವಿಚಾರವನ್ನು ಮಾಡೋದಿಲ್ಲ ಅಂತ ಹೇಳಿದೆ. ಆದರೆ ಲಕ್ಷ್ಮಿಪತಿಯವರು ನನಗೆ ಒತ್ತಾಯ ಮಾಡೋದಕ್ಕೆ ಪ್ರಾರಂಭ ಮಾಡಿದರು. ಎಷ್ಟೋ ಹೋರಾಟಗಳನ್ನು ನೀವು ಮಾಡಿದ್ದೀರಿ. ಈ ಹೋರಾಟವನ್ನು ನೀವೇ ಮಾಡಿದ್ರೆ ಅದರ ಬಲವೇ ಬೇರೆ ಆಗುತ್ತೆ. ಜೊತೆಗೆ ಅನ್ಯಾಯಕ್ಕೆ ಒಳಗಾದ ಯುವತಿಗೆ ನ್ಯಾಯ ಬೇಕು ಅಷ್ಟೇ. ನ್ಯಾಯವನ್ನು ನೀವೇ ನಿಂತು ಕೊಡಿಸಬೇಕು ಅಂತ ಒತ್ತಾಯ ಮಾಡಿದ್ದರು.
ಮೂರು ದಿನಗಳ ಒತ್ತಾಯದ ಬಳಿಕ ನಾನು ಒಪ್ಪಿಕೊಂಡೆ. ಬಳಿಕ ಲಕ್ಷ್ಮಿಪತಿ ಅವರು ನಮ್ಮ ಹಳ್ಳಿಗೆ ಬಂದು ಸಿಡಿಯನ್ನು ಕೊಟ್ಟಿದ್ದರು. ನಾನು ಆ ಸಿಡಿಯನ್ನು ಪ್ಲೇ ಮಾಡಿಯೂ ನೋಡಿರಲಿಲ್ಲ. ಬಳಿಕ ಮಾಧ್ಯಮಗಳಿಗೆ ತಿಳಿಸಿ ಕಮಿಷನರ್ ಕಚೇರಿಗೆ ಬಂದು ದೂರು ಕೊಟ್ಟೆ. ಇದರಲ್ಲಿ ನಾನೂ ಪಾಲುದಾರನೂ ಅಲ್ಲ, ಪಾಲನ್ನು ಕೂಡ ಪಡೆದಿಲ್ಲ.