ಬೆಂಗಳೂರು: ನಾನು ನಿಮ್ಮ ಜೊತೆ ಇದ್ದೀನಿ ಕಣೋ. ನೀನು ಚೆನ್ನಾಗಿ ಬೆಳೆಯಬೇಕು ಎಂದು ಹೇಳಿದ್ದರು. ಆದರೆ ಅವರ ಸಾವಿನ ಸುದ್ದಿ ನಮಗೆ ಶಾಕ್ ಆಗಿದೆ ಎಂದು ರವಿಬೆಳಗೆರೆ ಪುತ್ರ ಕರ್ಣ ಕಣ್ಣೀರು ಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರವಿಬೆಳಗೆರೆ ರಾತ್ರಿ ಪದ್ಮನಾಭ ಕಚೇರಿಯಲ್ಲಿ ಸಾವನ್ನಪ್ಪಿದ್ದಾರೆ. ರಾತ್ರಿ ಸುಮಾರು 12.15ರ ವೇಳೆಗೆ ಎದೆ ನೋವು ಕಾಣಿಸಿಕೊಂಡಿತ್ತು. ನಾನು ಹೋಗುವಷ್ಟರಲ್ಲಿ ಆಸ್ಪತ್ರೆಗೆ ಸಾಗಿಸಲೆಂದು ತಯಾರಾಗಿದ್ದರು. ಆದರೆ ಅದಾಗಲೇ ಅವರ ಸಾವು ಕೂಡ ಆಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಅವರು ನಮ್ಮ ಜೊತೆ ಇನ್ನೂ ಬಹಳ ದಿನಗಳ ಕಾಲ ಬದುಕಿರುತ್ತಿದ್ದರು ಅಂತ ಭಾವಿಸಿದ್ವಿ. ಪ್ರಾರ್ಥನಾ ಶಾಲೆ ಮತ್ತಷ್ಟು ಎತ್ತರಕ್ಕೆ ಬೆಳಸಬೇಕು ಅನ್ನೋ ಬಹುದೊಡ್ಡ ಆಸೆ ಅವರಿಗಿತ್ತು. ಅವರಿಗೆ ಡಯಾಬಿಟಿಸ್ ಇತ್ತು, ಕಾಲುಗಳ ನೋವಿತ್ತು. ಕಳೆದ ಮೂರು ದಿನಗಳ ಹಿಂದೆಯಷ್ಟೇ ನಾನು ಅವರ ಜೊತೆ ಮಾತನಾಡಿದ್ದರು. ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ದರು ಎಂದು ತಿಳಿಸಿದರು.
ನೀನು ಚೆನ್ನಾಗಿ ಬೆಳಯಬೇಕು ಅಂತ ಕೂಡ ಹೇಳಿದ್ದರು. ಆದರೆ ಅವರ ದಿಢೀರ್ ಸಾವಿನ ಸುದ್ದಿ ನಮಗೆ ಶಾಕ್ ಆಗಿದೆ. ಬೆಳಗ್ಗೆ 9 ಗಂಟೆಗೆ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ತನ್ನ ಬರಹದಿಂದಲೇ ಸಾಕಷ್ಟು ಮಂದಿ ಅಭಿಮಾನಿಗಳನ್ನು ಹೊಂದಿದ್ದ ರವಿ ಬೆಳಗೆರೆ ಅವರು ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್ ಮನೆಯಲ್ಲಿ ಹೃದಯಾಘಾತದಿಂದ ಅಸ್ತಂಗತರಾಗಿದ್ದಾರೆ.