– ಸಮುದಾಯದ ಓಲೈಕೆಗಾಗಿ ಬಿಎಸ್‍ವೈ ಪರ ಕಾಂಗ್ರೆಸ್ ಮಾತನಾಡುತ್ತಿದೆ
ರಾಮನಗರ: ನಾನು ಎರಡು ಬಾರಿಯೂ ಸಿಎಂ ಆಗಿದ್ದು, ಅದೃಷ್ಟದಿಂದಲೇ ಎಂದು ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಶಕ್ತಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ಗೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂಬ ವಿಶ್ವಾಸ ನನಗಿದೆ. ನಾನು ಎರಡು ಬಾರಿಯೂ ಅದೃಷ್ಟದಿಂದಲೇ ಸಿಎಂ ಆಗಿದ್ದೇನೆ. ಜನರ ಆರ್ಶೀವಾದದಿಂದ ನಾನು ಸಿಎಂ ಆಗಲಿಲ್ಲ. ತಾಯಿ ಚಾಮುಂಡೇಶ್ವರಿ ನನಗೆ ಅಧಿಕಾರ ಕೊಡ್ತಾಳೆ. ರಾಜ್ಯದ ಜನರ ಪರವಾಗಿ ಜೆಡಿಎಸ್ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪಗೆ ಸಿಎಂ ಸ್ಥಾನ ನೀಡುವಂತೆ ಒತ್ತಡ – ಕುರುಬರ ವೇದಿಕೆ ಸದಸ್ಯರಿಂದ ಮನವಿ
ಜೆಡಿಎಸ್ ಮುಗಿದೇ ಹೋಯ್ತು ಎನ್ನುವವರಿಗೆ ಮುಂದೆ ಉತ್ತರ ಸಿಗಲಿದೆ. ತಾಯಿ ಚಾಮುಂಡೇಶ್ವರಿ ಜೆಡಿಎಸ್‍ಗೆ ಅಧಿಕಾರ ಕೊಡ್ತಾಳೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
ಬಿಜೆಪಿ ಪಕ್ಷದ ಹೊಸ ಸಿಎಂ ಆಯ್ಕೆ ವಿಚಾರ ಮಾತನಾಡಿದ ಅವರು, ಅದು ಅವರ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ಯಾವುದೇ ಮಾಹಿತಿ ನನಗೆ ತಿಳಿದಿಲ್ಲ. ಈಗಾಗಲೇ ಪ್ರಧಾನಿ ಮೋದಿಯವರು ರಾಜ್ಯದ ಬಗ್ಗೆ ಮಾಹಿತಿ ಪಡೆದಿರುತ್ತಾರೆ. ಹಾಗಾಗಿ ಯಾರು ಸಿಎಂ ಆಗಬೇಕೆಂದು ಅವರ ಪಕ್ಷ ನಿರ್ಧಾರ ಮಾಡತ್ತೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಅವರ ಪರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕರ ವಿಚಾರವಾಗಿ ಮಾತನಾಡಿದ ಅವರು, ಇದು ಒಂದು ಸಮುದಾಯದ ಓಲೈಕೆಗಾಗಿ ಮಾಡುತ್ತಿರುವ ಪ್ರಯತ್ನವಾಗಿದೆ. ಈಗಾಗಲೇ ಮುಂದಿನ ಸಿಎಂಗೆ ಟವೆಲ್ ಹಾಕಿರುವವರು ಹೇಳುತ್ತಾರೆ. ಈಗಿದ್ದ ಸಿಎಂ ಭ್ರಷ್ಟರು, ಮುಂದೆ ಬರುವವರು ಭ್ರಷ್ಟರೇ ಎಂದು ಟಾಂಗ್ ಕೊಟ್ಟಿದ್ದಾರೆ.
ಜೆಡಿಎಸ್ ಪಕ್ಷ ಈ ಬೆಳವಣಿಗೆಯನ್ನು ಲಾಭದ ಬಗ್ಗೆ ಚಿಂತನೆ ಮಾಡಲ್ಲ. ಜನರ ಪರವಾಗಿ ಸರ್ಕಾರ ಚಿಂತಿಸಲಿ ಎಂದು ಹೇಳುತ್ತೇನೆ. ಈ ಬೆಳವಣಿಗೆಯಿಂದ ಜನರಿಗೆ ತೊಂದರೆಯಾಗಬಾರದು ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಮತ್ತು ಪತ್ನಿ ಅನಿತಾಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ.