– ಪೋಷಕರು ವಾರ್ನಿಂಗ್ ಮಾಡಿದ್ರೂ ಬುದ್ಧಿ ಕಲಿಯದ ವೃದ್ಧ
ಚೆನ್ನೈ: 16 ವರ್ಷದ ಅಪ್ರಾಪ್ತೆಗೆ 66 ವರ್ಷದ ವೃದ್ಧ ಲವ್ ಲೆಟರ್ ಕೊಟ್ಟಿದ್ದು, ಇದೀಗ ಆತನನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಆರೋಪಿಯನ್ನು 66 ವರ್ಷದ ಮೊಹಮ್ಮದ್ ಬಹೀರ್ ಬಾಷಾ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ನೆರೆಹೊರೆಯ 16 ವರ್ಷದ ಹುಡುಗಿಗೆ ಪ್ರೇಮ ಪತ್ರ ನೀಡಿದ್ದನು. ಆರೋಪಿ ವೃದ್ಧ ನೀಡಿದ ಪತ್ರದಲ್ಲಿ, “ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ. ನಿನಗೆ ಓಕೆ ನಾ” ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ವೃದ್ಧ ನೀಡಿದ ಪತ್ರವನ್ನು ನೋಡಿ ಹುಡುಗಿ ಗಾಬರಿಯಾಗಿ ತನ್ನ ತಾಯಿಗೆ ನೀಡಿದ್ದಾಳೆ. ನಂತರ ತಾಯಿ ತನ್ನ ಪತಿಯನ್ನು ಕರೆದುಕೊಂಡು ಆರೋಪಿ ಬಾಷಾ ಮನೆಗೆ ಹೋಗಿದ್ದಾರೆ. ಅಲ್ಲಿ ಆರೋಪಿಗೆ ಬೈದು ಮತ್ತೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಆರೋಪಿ ಕುಟುಂಬದದವರು ಹುಡುಗಿಯ ಪೋಷಕರ ಬಳಿ ವೃದ್ಧನ ವರ್ತನೆಗೆ ಕ್ಷಮೆ ಕೇಳಿದ್ದಾರೆ.
ಆದರೆ ಆರೋಪಿ ಬಾಷಾ ಮಾತ್ರ ಮತ್ತೆ ಹುಡುಗಿಯನ್ನು ಪ್ರೀತಿಸುವಂತೆ ಒತ್ತಾಯ ಮಾಡಿದ್ದಾನೆ. ಅಲ್ಲದೇ ಆಕೆಗೆ ಬೆದರಿಕೆ ಕೂಡ ಹಾಕಿದ್ದಾನೆ. ಇದರಿಂದ ಭಯಗೊಂಡ ಹುಡುಗಿ ಮನೆಯಿಂದ ಹೊರಬರಲು ಹೆದರುತ್ತಿದ್ದಳು. ಆಗ ಆಕೆಯ ಪೋಷಕರು ರಾಮನಾಥಪುರಂ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಬಾಷಾ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.