ಕೋಲಾರ: ಕಾಡುಹಂದಿಗಳ ಬೇಟೆಗಾಗಿ ಇಟ್ಟಿದ್ದ ನಾಡ ಬಾಂಬ್ ಸಿಡಿದು ಗಾಯಗೊಂಡಿದ್ದ ಗರ್ಭಿಣಿ ಸೀಮೆ ಹಸು ನರಳಾಡಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಬಂಗಾರಪೇಟೆ ತಾಲೂಕಿನ ಹೊಸೂರು ಗ್ರಾಮದ ರೈತ ಶ್ರೀನಿವಾಸನ್ ಎಂಬುವರಿಗೆ ಸೇರಿದ ಹಸುವಾಗಿದ್ದು, ಸುಮಾರು 80 ಸಾವಿರ ರೂಪಾಯಿ ಮೌಲ್ಯ ಹೊಂದಿತ್ತು. ಹಸು ಆಹಾರ ಅರಸಿಕೊಂಡು ಪಕ್ಕದಲ್ಲಿದ್ದ ಜಾಗದಲ್ಲಿ ಮೇಯುತ್ತಿದ್ದ ವೇಳೆ ನಾಡ ಬಾಂಬ್ ಸಿಡಿದು ಮೃತಪಟ್ಟಿದೆ.
ಈ ಭಾಗದಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಹಂದಿ ಬೇಟೆಗೆ ಇಟ್ಟಿದ್ದ ಕೇಪ್ ಉಂಡೆ ಸಿಡಿದು ಸೀಮೆಹಸು ಬಾಯಿ ಛಿದ್ರವಾಗಿತ್ತು, ವಿಷ ಮದ್ದಿನ ಉಂಡೆ ಸಿಡಿತದ ರಭಸಕ್ಕೆ ಇನ್ನೇನು 1 ತಿಂಗಳಲ್ಲಿ ಕರುವಿಗೆ ಜನ್ಮ ನೀಡಬೇಕಿದ್ದ ಸೀಮೆಹಸು ನರಳಿ ನರಳಿ ಸಾವನ್ನಪ್ಪಿದೆ. ಕಿಡಗೇಡಿ ಬೇಟೆಗಾರರು ಕಾಡುಹಂದಿಗಾಗಿ ಸ್ಪೋಟಕ ವಸ್ತುಗಳಿಂದ ಮಾಡಿದ್ದ ಈ ಕೃತ್ಯದಿಂದ ಎರಡು ಜೀವ ಬಲಿಯಾಗಿದೆ. ಇನ್ನೂ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಬಂಗಾರಪೇಟೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.