ಉಡುಪಿ: ಕಾಡು ನಾಶ ಆಗುತ್ತಿದ್ದು, ಕಾಡಿರುವ ಜಾಗದಲ್ಲಿ ನಾಡು ನಿರ್ಮಾಣ ಆಗಿದೆ ಎಂಬ ಒಂದು ದೊಡ್ಡ ಕೂಗು ಪರಿಸರವಾದಿಗಳಿಂದ ಕೇಳಿ ಬರುತ್ತಿದೆ. ಹೀಗಾಗಿಯೇ ನಾಡಿನೊಳಗೆ ಕಾಡು ನಿರ್ಮಾಣ ಮಾಡಲು ಉಡುಪಿಯ ಸಂಸ್ಥೆಯೊಂದು ಮುಂದಾಗಿದೆ. ಪೇಟೆಯೊಳಗೆ ಒಂದು ಚಿಕ್ಕ ಜಾಗ ಸಿಕ್ಕರೂ ಸಾಕು ಅಲ್ಲಿ ದೊಡ್ಡ ಕಾಡು ನಿರ್ಮಾಣ ಮಾಡಬೇಕು ಎಂಬ ಕನಸು ಈ ಸಂಸ್ಥೆಯದ್ದಾಗಿದೆ.
ಉಡುಪಿಯ ಸಂವೇದನಾ ಸಂಸ್ಥೆ ಸದ್ದಿಲ್ಲದೆ ಇಂತಹದೊಂದು ಕೆಲಸವನ್ನು ಮಾಡುತ್ತಿದೆ. ತನ್ನ ವನ ಸಂವೇದನಾ ಯೋಜನೆಯ ಅಂಗವಾಗಿ ಉಡುಪಿಯ ಮಲ್ಪೆ ಸಮೀಪದ ಕಂಗಣಬೆಟ್ಟು ಅಣ್ಣಪ್ಪ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಅರ್ಧ ಎಕರೆ ಜಮೀನಿನಲ್ಲಿ ಸಿರಿವನವನ್ನು ನಿರ್ಮಿಸಿದೆ. ಇದು ಸಂಸ್ಥೆಯ ಎರಡನೇ ವನ. ಇಲ್ಲಿ 23 ಜಾತಿಯ 600 ಗಿಡಗಳನ್ನು ತಿಂಗಳ ಹಿಂದೆ ನೆಟ್ಟಾಗಿದೆ.
ಬಿಲ್ವ ಪತ್ರೆ, ಮುತ್ತುಗ, ಶಿವಾನಿ, ಬಾಗೆ ಮರೆ, ಸಿಲ್ವರ್ ಓಕ್, ಬೀಟೆ, ರಕ್ತ ಚಂದನ ಹೀಗೆ 15 ಜಾತಿ ಆಯುರ್ವೇದ ಗಿಡ ನೆಡಲಾಗಿದೆ. ಅದರ ಪಾಲನೆ ಪೋಷಣೆಗೆ ಸ್ವಯಂ ಸೇವಕರ ತಂಡಕ್ಕೆ ಜವಾಬ್ದಾರಿ ಕೊಡಲಾಗಿದೆ.
ಸಿರಿವನದಲ್ಲಿ ಹಕ್ಕಿಗಳನ್ನು ಸೆಳೆಯುವ ಶಕ್ತಿಯಿರುವ ಮರಗಳನ್ನು ಬೆಳೆಸಲಾಗುತ್ತಿದೆ. ಈ ಪೈಕಿ ಮುತ್ತುಗ ಸಂಪೂರ್ಣ ಆಯುರ್ವೇದಿಕ್ ಸಸ್ಯ. ಎಲ್ಲಾ ಹಕ್ಕಿಗಳನ್ನು ಮುತ್ತುಗದ ಹೂವು ಆಕರ್ಷಿಸುತ್ತದೆ. ಮುತ್ತುಗಕ್ಕೆ ಆ ಶಕ್ತಿಯಿದೆ. ಸುಮಾರು 20ಕ್ಕೂ ಹಕ್ಕಿಗಳನ್ನು ಸೆಳೆಯುವ ಗಿಡಗಳನ್ನು ನೆಡಲಾಗಿದೆ. ಕಾಗೆಯನ್ನು ಯಾವ ಹೂವುಗಳೂ ಆಕರ್ಷಿಸುವುದಿಲ್ಲ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂವೇದನಾ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್, ಸಮಾನ ಮನಸ್ಕರ ತಂಡ ಪರಿಸರದ ಬಗ್ಗೆ ಚಿಂತನೆ ಮಾಡಿದಾಗ ಯೋಜನೆ ಚರ್ಚೆಗೆ ಬಂತು. ನಾಡಿನೊಳಗೊಂದು ಕಾಡು ನಿರ್ಮಾಣ ಆಗಬೇಕು. ಅದು ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿಗೂ ಉಪಯೋಗ ಆಗಬೇಕು ಎಂಬುದು ನಮ್ಮ ಉದ್ದೇಶ. ನಮ್ಮ ಊರಿನ, ರಾಜ್ಯದ ಅಲ್ಲಲ್ಲಿ ಪುಟ್ಟ ಪುಟ್ಟ ಕಾಡುಗಳನ್ನು ನಾವು ನಿರ್ಮಾಣ ಮಾಡುವ ಸಂಕಲ್ಪ ಹೊಂದಿದ್ದೇವೆ. ಇದರ ಜೊತೆ ಪರಿಸರ ಕಾಳಜಿಯ ಹತ್ತು ಹಲವು ಕೆಲಸಗಳನ್ನು ಮಾಡುತ್ತಿದ್ದೇವೆ. ನಮಗೆ ಖಾಲಿ ಜಮೀನು ಮತ್ತು ಊರಿನ ಆಸಕ್ತ ಯುವಕ ತಂಡ ಸಿಕ್ಕರೆ ನಿಮ್ಮೂರಲ್ಲೂ ಇಂತಹ ವನ ಕಟ್ಟುತ್ತೇವೆ ಎಂದು ಹೇಳಿದರು.