ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಹೊಳೆ, ಬಂಡೀಪುರ ಸಫಾರಿ ಬಂದ್ ಮಾಡಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.
ಜುಲೈ 10ರಿಂದ ಮುಂದಿನ ಆದೇಶದವರೆಗೆ ಹೊರ ಜಿಲ್ಲೆ/ರಾಜ್ಯ/ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಹೆಚ್.ಡಿ.ಕೋಟೆ ತಾಲೂಕಿನ ಎಲ್ಲ ಹೋಟೆಲ್, ರೆಸಾರ್ಟ್, ಲಾಡ್ಜ್, ಹೋಂ ಸ್ಟೇಗಳಲ್ಲಿ ವಸತಿ ಸೌಕರ್ಯ ನೀಡಕೂಡದು. ಮುಂದಿನ ಹೊರಭಾಗದ ಪ್ರವಾಸಿಗರ ಆನ್‍ಲೈನ್ ಅಥವಾ ಆಫ್‍ಲೈನ್ ಮುಂತಾದ ರೂಪದ ಬುಕ್ಕಿಂಗ್ ಮಾಡಿಕೊಳ್ಳಬಾರದು.
ಸದ್ಯ ವಸತಿ ಸೌಕರ್ಯ ಪಡೆದುಕೊಂಡಿರುವ ಪ್ರವಾಸಿಗರನ್ನು ಬಲವಂತವಾಗಿ ಕಳಿಸಕೂಡದು. ಅವರ ಬುಕ್ಕಿಂಗ್ ಅವಧಿ ಮುಗಿಯವರೆಗೂ ಸೇವೆ ನೀಡತಕ್ಕದ್ದು ಎಂದು ಆದೇಶಿಸಿದೆ. ಪ್ರವಾಸಿ ಉದ್ದೇಶಕ್ಕೆ ಮುಂಗಡ ಬುಕ್ಕಿಂಗ್ ಮಾಡಿ ಆಗಮಿಸಿರದಿದ್ದಲ್ಲಿ ಸೂಕ್ತ ಮಾಹಿತಿ ನೀಡಿ ಬುಕ್ಕಿಂಗ್ ರದ್ದುಗೊಳಿಸಬೇಕು.
ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಬರುವ ದಮ್ಮನಕಟ್ಟೆ, ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳಲ್ಲಿ ಬರುವ ಎಲ್ಲ ಸಫಾರಿಗಳಿಗೂ ಸಹ ಅನ್ವಯವಾಗುತ್ತದೆ. ಮುಂದಿನ ಆದೇಶದವರೆಗು ಇಡೀ ತಾಲೂಕಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವಂತಿಲ್ಲ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.