ಹಾಸನ: ನಷ್ಟ ಮಾಡಿದವನ ಬಳಿ ಹಣವಿಲ್ಲದಿದ್ದರೆ ಬೆಂಕಿ ಇಡು ಎಂದು ಹೇಳಿದವನ ಬಳಿ ವಸೂಲಿ ಮಾಡುತ್ತೇವೆ ಎಂದು ಬೆಂಗಳೂರಿನ ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಲಾಸ್ ಮಾಡಿದವರು, ಪ್ರಚೋದನೆ ಮಾಡಿದವರು, ಪಿತೂರಿ ಮಾಡಿದವರಿಂದ ಆಗಿರುವ ನಷ್ಟದ ವಸೂಲಿ ಮಾಡುತ್ತೇವೆ ಎಂದರು.
ಡಿಜೆ ಹಳ್ಳಿಯಂಥ ಪ್ರಕರಣದಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ಬ್ಯಾನ್ ಮಾಡಲು ಕರ್ನಾಟಕದಲ್ಲಿ 1981 ರಲ್ಲಿ ಕಾಯ್ದೆ ಮಾಡಿದ್ದೆವು. ಅದರ ಪ್ರಕಾರ ಕಮಿಷನ್ ನೇಮಕ ಮಾಡಬೇಕಾಗಿದೆ. ಯಾರು ಪ್ರಚೋದನೆ ಮಾಡಿದ್ದಾರೆ. ಯಾರು ಸಂಘಟನೆ ಮಾಡಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯ ಸರ್ಕಾರ ನಡೆಸುವಾಗ ಎಮೋಷನಲ್ ಆಗಿ ಮಾತನಾಡಲು ಆಗಲ್ಲ. ಪೊಲೀಸರು ಸಾಕ್ಷ್ಯಾಧಾರ ಕಲೆ ಹಾಕುತ್ತಿದ್ದು, ಅವರು ನ್ಯಾಯಾಲಯಕ್ಕೆ ದಾಖಲೆ ಒದಗಿಸಲಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಈ ಗಲಭೆಗೆ ಸಂಬಂಧಿಸಿದಂತೆ ಇನ್ನೂ ಎರಡು ಮೂರು ವಿಷಯ ಸೇರಿಸಿಕೊಳ್ಳಲು ಹೇಳಿದ್ದಾರೆ. ಸದ್ಯಕ್ಕೆ ಆ ವಿಷಯ ನಮ್ಮ ಮುಂದೆ ಇಲ್ಲ. ತಪ್ಪು ಮಾಡಿದವರನ್ನು ರಕ್ಷಣೆ ಮಾಡುವ ಮಾತೇ ಇಲ್ಲ. ನಾವು ಪಬ್ಲಿಕ್ ಪ್ರಾಪರ್ಟಿಗೆ ಸಂಬಂಧಿಸಿದ ಕಾಯ್ದೆ ಅನ್ವಯ ಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆ ಕಾಯಿದೆಯಲ್ಲಿ ಸಾಕಷ್ಟು ಶಕ್ತಿ ಇಲ್ಲ ಎಂದರೇ ಈ ವಿಚಾರದಲ್ಲಿ ಉತ್ತರ ಪ್ರದೇಶದ ಕಾನೂನು ಏನಿದೆ ಅದನ್ನೂ ಪರಿಶೀಲಿಸಿ, ಇನ್ನೇನಾದರೂ ಕಾಯ್ದೆಯಲ್ಲಿ ತಿದ್ದುಪಡಿ ಮಾಡಬಹುದಾ ಎಂಬುದನ್ನು ನೋಡಿ ನಷ್ಟ ವಸೂಲಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.