– ನಗರಸಭೆ ನೌಕರನಿಂದ ಮಗು ರಕ್ಷಣೆ
ಉಡುಪಿ: ಸುರಿಯುವ ಮಳೆಯಲ್ಲಿ ಪಾಪಿ ತಾಯಿಯೊಬ್ಬಳು ನವಜಾತ ಶಿಶುವನ್ನು ಕಸದಬುಟ್ಟಿಯಲ್ಲಿ ಎಸೆದು ಹೋಗಿದ್ದಾಳೆ. ಈ ಅಮಾನವೀಯ ಘಟನೆ ಉಡುಪಿ ನಗರದ ಚಿತ್ತರಂಜನ್ ಸರ್ಕಲ್ ಬಳಿ ನಡೆದಿದೆ.
ಉಡುಪಿಯಲ್ಲಿ ಕಳೆದ 10 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಇಂದು ಬೆಳಗ್ಗೆಯಿಂದ ನಿರಂತರ ಮಳೆಯಾಗುತ್ತಿದೆ. ಭಾರೀ ಮಳೆಯ ನಡುವೆಯೇ ಹೋಟೆಲೊಂದರ ಮುಂಭಾಗದ ಕಸದ ಬುಟ್ಟಿಗೆ ಪಾಪಿಗಳು ಮಾನವೀಯತೆ ಮರೆತು ಮಗು ಎಸೆದು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಉಡುಪಿ ನಗರಸಭೆಯ ಪೌರಕಾರ್ಮಿಕರು ಕಸ ಕೊಂಡೊಯ್ಯಲು ಬರುವಾಗ ಮಗುವಿನ ಅಳು ಕೇಳಿದೆ.
ಕಸದ ಬುಟ್ಟಿಯನ್ನು ಪರಿಶೀಲಿಸಿದಾಗ ನವಜಾತ ಶಿಶು ಪತ್ತೆಯಾಗಿದೆ. ಹೋಟೆಲ್ ಮಾಲೀಕರಿಗೆ, ಸುತ್ತಮುತ್ತ ಸಾರ್ವಜನಿಕರ ವಿಚಾರ ಗಮನಕ್ಕೆ ತಂದಿದ್ದಾರೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಉಡುಪಿ ಜಿಲ್ಲಾ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗು ಇಂದು ಬೆಳಗ್ಗೆ ಹುಟ್ಟಿದ್ದು ಮಗುವಿನ ಕರುಳಬಳ್ಳಿಯನ್ನು ಕೂಡ ಕತ್ತರಿಸಲಾಗಿಲ್ಲ. 9 ತಿಂಗಳು ಹೊತ್ತು, ಮಗುವನ್ನು ಯಾವುದೇ ಕರುಣೆ ಇಲ್ಲದೆ ಕಸದಬುಟ್ಟಿಯಲ್ಲಿ ಎಸೆದ ಪ್ರಕರಣ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಹೆಣ್ಣು ಮಗುವೆಂದು ನವಜಾತ ಶಿಶುವನ್ನು ಕಸದಬುಟ್ಟಿಗೆ ಎಸೆದಿರುವ ಸಾಧ್ಯತೆ ಇದೆ. ಸದ್ಯ ಮಗು ಹೆರಿಗೆ ಆಸ್ಪತ್ರೆಯಲ್ಲಿ ಆರೋಗ್ಯವಾಗಿದೆ ಎಂದು ನಿತ್ಯಾನಂದ ಒಳಕಾಡು ಹೇಳಿದ್ದಾರೆ. ಉಡುಪಿ ನಗರ ಠಾಣೆಯ ಎಸ್ ಐ ಶಕ್ತಿವೇಲು, ಮಹಿಳಾ ಠಾಣೆ ಎಸ್ ಐ ವೈಲೆಟ್ ಫೆಮಿನಾ ಮತ್ತಿತರರು ಸಮ್ಮುಖದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.